ಶಿರಸಿ: ಈ ವರ್ಷ ತಾಲೂಕಿನಲ್ಲಿ ವಾಡಿಕೆ ಮಳೆಗಿಂತ ಶೇ. 39 ರಷ್ಟು ಅಧಿಕ ಮಳೆಯಾಗಿದೆ. ಮಳೆ ಇನ್ನೂ ಮುಂದುವರಿದಿದ್ದು, ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಸೆ. 1 ರವರೆಗೆ ತಾಲೂಕಿನ ವಾಡಿಕೆ ಮಳೆ 1935 ಮಿ.ಮೀ. ಇದೆ. ಆದರೆ, ಇದುವರೆಗೆ 2759 ಮಿ.ಮೀ ಮಳೆಯಾಗಿದೆ. ವಾರ್ಷಿಕವಾಗಿ ಗಣೇಶ ಚೌತಿಯ ವೇಳೆಯಲ್ಲಿ ಮಳೆಯ ಅಬ್ಬರ ಇಳಿಮುಖವಾಗುತ್ತಿತ್ತು. ಈ ವರ್ಷ ಅಬ್ಬರದ ಮಳೆ ಸುರಿದು ಅನಾಹುತಗಳನ್ನು ಸೃಷ್ಠಿ ಮಾಡಿದೆ. ಆ. 26 ರಿಂದ ಸೆ. 1 ರವರೆಗೆ ವಾರ್ಷಿಕವಾಗಿ 65 ಮಿ.ಮೀ ಸರಾಸರಿ ಮಳೆ ಸುರಿಯುತ್ತಿತ್ತು.ಆದರೆ, 138 ಮಿ. ಮೀ ಮಳೆಯಾಗಿದ್ದು, ಶೇ.113 ರಷ್ಟು ಹೆಚ್ಚಾದಂತಾಗಿದೆ.
ತಾಲೂಕಿನ ವಾನಳ್ಳಿ ಮತ್ತು ಸಂಪಖಂಡ ಹೋಬಳಿಯಲ್ಲಿ ಮಳೆಯ ಪರಿಣಾಮ ಕಾಣುತ್ತಿದೆ. ಅಡಕೆ ಬೆಳೆಗೆ ಕೊಳೆ ರೋಗ ಆವರಿಸಿದ್ದು, ರೈತರ ನಿದ್ದೆಗೆಡಿಸಿದೆ. ಈಗಾಗಲೇ ಎರಡು ಬಾರಿ ಬೋರ್ಡೋ ದ್ರಾವಣ ಸಿಂಪಡಣೆ ಮಾಡಿದ್ದರೂ, ಕೊಳೆ ರೋಗ ನಿಯಂತ್ರಣಕ್ಕೆ ಬರದೇ ಮೂರನೇ ಬಾರಿ ಸಿಂಪಡಣೆಗೆ ಅಡಿಕೆ ಬೆಳೆಗಾರರು ಸಿದ್ಧತೆ ನಡೆಸಿದ್ದಾರೆ. ಇನ್ನು ಬನವಾಸಿ ಯೋಬಳಿಯಲ್ಲಿ ಭತ್ತದ ಗದ್ದೆಗೆ, ಬಾಳೆ ತೋಟಗಳಿಗೆ ಮಳೆ ಹಾನಿ ಉಂಟುಮಾಡುತ್ತಿದೆ. ರೈತರು ಕಂಗಾಲಾಗುವಂತೆ ಮಾಡಿದೆ.