ಮಳೆರಾಯ ಸೃಷ್ಟಿಸಿದ ಅವಾಂತರಕ್ಕೆ ಲಕ್ಷಾಂತರ ರೂ ಸೂರ್ಯಕಾಂತಿ ಬೆಳೆ ಹಾನಿ

ಗದಗ: ಜಿಲ್ಲೆಯಲ್ಲಿ ಮಳೆ ಮಾಡಿದ ಅವಾಂತರಕ್ಕೆ ರೈತರು ತತ್ತರಗೊಂಡಿದ್ದಾರೆ. ಕಟಾವು ಮಾಡಿ ಸಂಗ್ರಹಿಸಿಟ್ಟಿದ್ದ ಸೂರ್ಯಕಾಂತಿ ರಾಶಿಗೆ ನುಗ್ಗಿದ ಅಪಾರ ನೀರು ಬೆಳೆಯನ್ನು ನಾಶಮಾಡಿದೆ. ಮುಂಡರಗಿ ತಾಲೂಕಿನ ಮಕ್ತಂಪೂರ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ರೈತರು ಬೆಳೆದ ಬೆಳೆ ಮಳೆಗೆ ಆಹುತಿಯಾಗಿದೆ.

ಗ್ರಾಮದ ಹೊರವಲಯದಲ್ಲಿ ಕಟಾವು ಮಾಡಿ ಸೂರ್ಯಕಾಂತಿ ರಾಶಿ ಹಾಕಲಾಗಿತ್ತು. ರಾತ್ರಿ ಸುರಿದ ಭಾರಿ ಮಳೆಯಿಂದ, ಸೂರ್ಯಕಾಂತಿ ರಾಶಿಗೆ ನೀರು ನುಗ್ಗಿದ ಪರಿಣಾಮ ಕಷ್ಟಪಟ್ಟು ಬೆಳೆಗೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ. ಗ್ರಾಮದ ಹನಮಂತ ಪೂಜಾರ, ಯಂಕಪ್ಪ ವಾಲಿಕಾರ, ಶಿವಾನಂದ ಬರದೂರ ಮುದಿಯಪ್ಪ ತಿಪ್ಪಣ್ಣವರ, ದೇವಪ್ಪ ವಾಲಿಕಾರ ಸೇರಿದಂತೆ ಹಲವು ರೈತರಿಗೆ ಸಂಕಷ್ಟ ಎದುರಾಗಿದೆ. ಲಕ್ಷಾಂತರ ರೂಪಾಯಿ ಸೂರ್ಯಕಾಂತಿ ರಾಶಿ ನೀರಿಗೆ ಆಹುತಿಯಾಗಿದೆ. ಬೆಳೆಹಾನಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.