ಭಟ್ಕಳ ಪೊಲೀಸ್ ಠಾಣೆಯ ಆವರಣದ ಗಣೇಶೋತ್ಸವದಲ್ಲಿ ಅನ್ನಸಂತರ್ಪಣೆ ಮಾಡಿದ ಪೊಲೀಸ್ ಇಲಾಖೆ

ಭಟ್ಕಳ: ಭಟ್ಕಳ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ವತಿಯಿಂದ ವಿಜೃಂಭಣೆಯಾಗಿ ಇಲ್ಲಿನ ನಗರ ಠಾಣೆ ಆವರಣದಲ್ಲಿ ಗಣೇಶೋತ್ಸವವನ್ನು ಆಯೋಜಿಸಿದ್ದು, ಸಹಸ್ರಾರು ಭಕ್ತರಿಗೆ ಇಂದು ಅನ್ನಸಂತರ್ಪಣೆ ನೆರವೇರಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ 5 ದಿನಗಳ ಕಾಲ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಗಣೇಶ ಹಬ್ಬವನ್ನು ಆಚರಿಸಲಿದ್ದಾರೆ. ಅದರಂತೆ ಮೂರನೇ ದಿನವಾದ ಇಂದು ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಿದರು. 

ಹೊರಗಿನಿಂದ ಯಾವುದೇ ದೇಣಿಗೆ ಸಂಗ್ರಹಿಸದೇ ನಗರ ಹಾಗೂ ಗ್ರಾಮೀಣ ಪೊಲೀಸ್  ಠಾಣೆಯ ಸಿಬ್ಬಂದಿಗಳೇ ಅನ್ನ ಸಂತರ್ಪಣೆ ಖರ್ಚು ವೆಚ್ಚಗಳನ್ನು ವ್ಯಯಿಸಿ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಅನ್ನದಾನ ಸೇವೆಯನ್ನು ಮಾಡಿದ್ದಾರೆ. ಈ ರೀತಿ ಆಚರಣೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳದಲ್ಲಿ ಮಾತ್ರ ಕಾಣಸಿಗುತ್ತದೆ.

ದಿನ ನಿತ್ಯ ಹೊಡೆದಾಟ, ಕಳ್ಳತನ ಇತ್ಯಾದಿ ಪ್ರಕರಣದಲ್ಲಿ ತೊಡಗಿಕೊಂಡಿರುವ ಪೊಲೀಸರಿಗೆ ಈ ರೀತಿ ಎಲ್ಲರು ಒಟ್ಟಿಗೆ ಸೇರಿ ಹಬ್ಬ ಆಚರಿಸುವುದು ಸಂತೋಷ ತರುತ್ತದೆ. ಮೂರನೇ ದಿನವಾದ ಇಂದು ಮಧ್ಯಾಹ್ನ ಮಹಾಪೂಜೆ ನೆರವೇರಿದ ನಂತರ ಬಂದ ಎಲ್ಲರಿಗೂ ಅನ್ನದಾನ ಸೇವೆ ಮಾಡಿದ್ದಾರೆ. ಪ್ರತಿ ವರ್ಷ ಭಟ್ಕಳ ಪೊಲೀಸ್ ಇಲಾಖೆಯಿಂದ ನಡೆಯುವ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.