ಉಮ್ಮಚಗಿಯಲ್ಲಿ ಮಳೆಯಿಂದ ಅಪಾರ ಹಾನಿ: ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿದ ಜನಪ್ರತಿನಿಧಿಗಳು

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ವಿವಿಧೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಹಾನಿಯಾದ ಸ್ಥಳಗಳಿಗೆ ಶುಕ್ರವಾರ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾ.ಪಂ. ಅಧ್ಯಕ್ಷೆ ರೂಪಾ ಪೂಜಾರಿ, ಸದಸ್ಯರಾದ ಖೈತಾನ್ ಡಿಸೋಜ, ಅಶೋಕ ಪೂಜಾರಿ ಇತರರು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತರಿಗೆ ಧೈರ್ಯ ಹೇಳಿದರು.

ಕಲ್ಲರೆಜಡ್ಡಿಯ ಉಲ್ಲಾಸ್ ನುರೋನ, ಆನಂದ ಡಿಸೋಜ, ಫಾತೀಮ ಜೊಜೆ ಡಿಸೋಜ ಮುಂತಾದವರಿಗೆ ಸೇರಿದ ಗದ್ದೆ, ಅಡಕೆ ತೋಟಗಳಲ್ಲಿ ಆಳೆತ್ತರ ನೀರು ಹರಿದ ಪರಿಣಾಮ ಹೊಸದಾಗಿ ನಾಟಿ ಮಾಡಿದ ಅಡಿಕೆ ಗಿಡಗಳು, ಕಾಳುಮೆಣಸುಗಳಿಗೆ ಹಾಕಿದ ಗೊಬ್ಬರ, ಮುಚ್ಚಿಗೆಗಳು ನೀರು ಪಾಲಾಗಿವೆ. ನಾಟಿ ಮಾಡಿದ ಭತ್ತದ ಗಿಡಗಳೆಲ್ಲ ಕೊಚ್ಚಿಕೊಂಡು ಹೋಗಿವೆ.

ತುಡುಗುಣಿಯ ರತ್ನಾಕರ ಬಲ್ಸೆ, ರಾಜಾರಾಮ ರಾಯ, ಓಮನ್ ರಾಯ, ಹಂದಿಮನೆಯ ಹರೀಶ ಹೆಗಡೆ, ಪ್ರಕಾಶ ಹೆಗಡೆ ಮೊದಲಾದವರಿಗೆ ಸೇರಿದ ಜಮೀನುಗಳಲ್ಲಿಯೂ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಸುಮಾರು ಹದಿನಾರು ಎಕರೆಗೂ ಹೆಚ್ಚು ಭತ್ತದ ಬೆಳೆಗೆ ಅತಿ ಹೆಚ್ಚು ಹಾನಿಯಾಗಿದೆ. ಅಡಿಕೆ ತೋಟದಲ್ಲಿ ಅಪಾರ ಪ್ರಮಾಣದ ನೀರು ಹರಿದಿರುವುದರಿಂದ ಅಡಿಕೆಗೆ ಕೊಳೆ, ಕಾಳು ಮೆಣಸಿನ ಬಳ್ಳಿಗಳು ರೋಗಕ್ಕೆ ತುತ್ತಾಗುವ ಸಂಭವವಿದೆಯೆಂದು ರೈತರು ಕಂಗಾಲಾಗಿದ್ದಾರೆ.