ಕುಮಟಾ: ತಾಲೂಕಿನ ಪ್ರಸಿದ್ಧ ನ್ಯಾಯವಾದಿಗಳು ಹಾಗೂ ಹವ್ಯಕ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಶಂಕರಮೂರ್ತಿ ಶಾಸ್ತ್ರಿ ಅನಾರೋಗ್ಯದಿಂದ ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಉಪ್ಪಿನ ಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿದ್ದ ಇವರು, ಡಾ.ಟಿ.ಟಿ.ಹೆಗಡೆ ನಿಧನಾನಂತರ ಹವ್ಯಕ ವಿದ್ಯಾವರ್ಧಕ ಸಂಘವನ್ನು ಮುನ್ನೆಡೆಸಿಕೊಂಡು ಹೋಗುತ್ತಿದ್ದರು. ಕೆಲ ತಿಂಗಳ ಹಿಂದೆ ಹವ್ಯಕ ಹಬ್ಬ ಆಚರಣೆ ಮಾಡಿ ಜಿಲ್ಲೆಯ ಜನರ ಗಮನಸೆಳೆದಿದ್ದರು.
ಕಳೆದ ಅನೇಕ ದಿನಗಳಿಂದ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಲೂಕಿನ ಪ್ರಸಿದ್ಧ ವಕೀಲರಲ್ಲಿ ಒಬ್ಬರಾಗಿದ್ದ ಇವರು, ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು. ಇದೀಗ ತಮ್ಮ ಕುಟುಂಬ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಸದ್ಗತಿಯನ್ನು ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಉಪ್ಪಿನ ಗಣಪತಿ ದೇವರು ನೀಡಲೆಂದು ಅವರ ಹಿತೈಷಿಗಳು, ಸ್ನೇಹಿತರು ಹಾಗೂ ಬಂಧುಗಳು ಪ್ರಾರ್ಥಿಸಿದ್ದಾರೆ.
ಪಟ್ಟಣದ ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾಭವನದಲ್ಲಿ ಶಂಕರಮೂರ್ತಿಯವರ ಅಂತಿಮ ನಮನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಾಸಕ ದಿನಕರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಕೆನರಾ ಹೇಲ್ತ್ ಕೇರ್ ಸೆಂಟರ್ ಮುಖಸ್ಥ ಡಾ.ಜಿ.ಜಿ.ಹೆಗಡೆ, ಜೆ.ಡಿ.ಎಸ್ ಮುಖಂಡ ಶಶಿಭೂಷಣ ಹೆಗಡೆ, ಬಿಜೆಪಿ ಪ್ರಮುಖರಾದ ಎನ್.ಎಸ್.ಹೆಗಡೆ ಸೇರಿದಂತೆ ವಿವಿಧ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.