ಮುಂಡಗೋಡ: ಪಟ್ಟಣದಲ್ಲಿ ಹಂದಿಗಳ ನಿಯಂತ್ರಣಕ್ಕೆ ಪ.ಪಂ ಮುಂದಾಗಿದೆ. ಹಂದಿಗಳ ಉಪಟಳ ಹೆಚ್ಚಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ ಹಂದಿ ಹಾವಳಿಗೆ ಬ್ರೇಕ್ ಹಾಕಲು ಸ್ಥಳೀಯ ಆಡಳಿತ ಮುಂದಾಗಿದ್ದು ಕಳೆದ ಒಂದು ವಾರದಲ್ಲಿ ಹಂದಿಗಳನ್ನು ಹಿಡಿಸಿ ಸ್ಥಳಾಂತರಿಸಲು ಮುಂದಾಗಿದೆ. ಈ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಏಳೆಂಟು ದಿನಗಳ ಹಿಂದೆ ಹಂದಿಗಳ ಮಾಲೀಕರಿಗೆ ನೋಟಿಸ್ ನೀಡಿದರೂ ಯಾರೋಬ್ಬರು ಹಂದಿಗಳನ್ನು ಹಿಡಿಯುವ, ಸ್ಥಳಾಂತರ ಮಾಡುವ ಗೋಜಿಗೆ ಹೋಗಿರಲಿಲ್ಲ. ಅದಕ್ಕಾಗಿ ಮುಖ್ಯಾಧಿಕಾರಿ ಕ್ರಮ ಕೈಗೊಂಡು ಹಂದಿಗಳನ್ನು ಹಿಡಿದು ಮಾರಾಟ ಮಾಡುವವರನ್ನು ಕರೆಸಿ, ಎರಡು ಮೂರು ಲಾರಿಗಳಷ್ಟು ಹಂದಿಗಳನ್ನು ಹಿಡಿದು ಸಾಗಿಸಲಾಗಿತ್ತು.
ಅದನ್ನು ತಿಳಿದ ಹಂದಿ ಮಾಲಿಕರು ಕಳೆದ ಎರಡು ಮೂರು ದಿನಗಳಿಂದ ಪಟ್ಟಣ ವ್ಯಾಪ್ತಿಯಲ್ಲಿರುವ 500 ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು ಮುಂದಾಗಿದ್ದಾರೆ. ಇದರಿಂದ ಪಟ್ಟಣದ ಜನರು ಹಂದಿಗಳ ಕಾಟದಿಂದ ಮುಕ್ತಿಹೊಂದಿ ನೆಮ್ಮದಿಯಿಂದ ಇರುವಂತಾಗಿದೆ.
ಮಳೆಗಾಲದಲ್ಲಿ ರೋಗಗಳು ಹರಡುವ ಸಂಭವವಿದ್ದು ಹಾಗೂ ಮನೆಗೆ ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಹಂದಿಗಳನ್ನು ತಕ್ಷಣ ಹಿಡಿದು ಬೇರೆಡೆ ಸಾಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತದವರು ಹಂದಿಗಳನ್ನು ಹಿಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಪಟ್ಟಣ ಪಂಚಾಯತದವರ ಸೂಚನೆಯಂತೆ ಪಟ್ಟಣದಲ್ಲಿನ 500 ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಬೇರೆಡೆಗೆ ಸಾಗಾಟ ಮಾಡಿದ್ದೇವೆ. ಇನ್ನೂ ಕೆಲವಷ್ಟು ಉಳಿದಿವೆ. ಅವುಗಳನ್ನು ಮುಂದಿನ ದಿನಗಳಲ್ಲಿ ಹಿಡಿದು ಸ್ಥಳಾಂತರ ಮಡಲಾಗುವುದು. ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳು ಅನಾರೋಗ್ಯದಿಂದ ಅಥವಾ ಇನ್ನಾವುದೋ ಕಾರಣದಿಂದ ಬಿದ್ದು ಸತ್ತರೆ ಕೂಡಲೇ ಸ್ಥಳಕ್ಕೆ ಹೋಗಿ ಅವುಗಳನ್ನು ತೆರವು ಮಾಡುವ ಕಾರ್ಯವನ್ನು ಮಾಡುತ್ತಿದ್ದೇವೆ. ಪಟ್ಟಣ ಪಂಚಾಯತದವರು ನಮಗೆ ತಿಳಿಸದೇ ಹಂದಿಗಳನ್ನು ಮಾರಾಟ ಮಾಡಿದ್ದರಿಂದ ನಮಗೆ 5-6 ಲಕ್ಷ ರೂಪಾಯಿ ಹಾನಿಯಾಗಿದೆ ಎಂದು ಸ್ಥಳಿಯ ಹಂದಿಗಳ ಮಾಲೀಕರಾದ ಗದಗೇಪ್ಪ ಕುಂಚಿಕೋರ ಹಾಗೂ ಗಂಗಪ್ಪಾ ಕುಂಚಿಕೋರ ತಿಳಿಸಿದರು.