ಶಿರ್ವೆ ಗ್ರಾಮಕ್ಕೆ ಮೊಬೈಲ್ ಟವರ್ ನಿರ್ಮಿಸಿಕೊಂಡುವಂತೆ ಡಿಸಿಗೆ ಮನವಿ

ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮ ಶಿರ್ವೆಯ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಯಾವುದಾದರೂ ಒಂದು ಟೆಲಿಕಾಂ ಟವರ್ ನಿರ್ಮಿಸಿಕೊಡುವಂತೆ ಮಂಗಳವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಶಿರ್ವೆ ಗ್ರಾಮಸ್ಥರು ಅತಿಹೆಚ್ಚು ಕೃಷಿಯ ಮೇಲೆ ಅಲಂಬಿತರಾಗಿದ್ದಾರೆ. ಗ್ರಾಮವು ಪ್ರವಾಸಿಗರಿಗೆ ನೆಚ್ಚಿನ ತಾಣ ಸಹ ಆಗಿದೆ. ಈ ಗ್ರಾಮದ ಪ್ರಮುಖ ಸಮಸ್ಯೆ ಅಂದರೆ ನೆಟ್ವರ್ಕ್ ಸಂಪರ್ಕ ಇಲ್ಲದೇ ಇರುವುದು. ಸಮೀಪದ ದೇವಳಮಕ್ಕಿ ಗ್ರಾಮದಲ್ಲಿ ಬಿ.ಎಸ್.ಎನ್.ಎಲ್ ಟವರ್ ಇದ್ದರೂ ಸಹ ಶಿರ್ವೆ ಗ್ರಾಮದಲ್ಲಿ ನೆಟ್ವರ್ಕ್ ಸಂಪರ್ಕ ಸಿಗುವುದಿಲ್ಲ.

ತುರ್ತು ಸಮಸ್ಯೆ ಆದರೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದ ಸಂಸ್ಥೆಗಳಿಂದ ಸಿಗುವ ಉಪಯುಕ್ತ ಮಾಹಿತಿಗಳು ಸರಿಯಾದ ಸಮಯಕ್ಕೆ ತಲುಪುವುದಿಲ್ಲ. ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ವಾಹನ ವ್ಯವಸ್ಥೆಗೆ ಕಾಲ್ ಮಾಡಲೂ ನೆಟ್ವರ್ಕ್ ಸಿಗದೇ ಬೆಟ್ಟ ಗುಡ್ಡ ಹತ್ತುವುದು ಅನಿವಾರ್ಯವಾಗಿದೆ. ಹೀಗಾಗಿ ಶಿರ್ವೆ ಗ್ರಾಮಕ್ಕೆ ಬಿ.ಎಸ್.ಎನ್.ಎಲ್ ಅಥವಾ ಬೇರೆ ಯಾವುದೇ ಖಾಸಗಿ ನೆಟ್ವರ್ಕ್ ಟವರ್ ಒದಗಿಸಿಕೊಡಬೇಕೆಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಈ ಸಂದರ್ಭದಲ್ಲಿ ದೇವಳಮಕ್ಕಿ ಯುವ ಮುಖಂಡ ಪ್ರಜ್ವಲ್ ಬಾಬುರಾಯ ಶೇಟ್, ಗ್ರಾಮಸ್ಥರಾದ ಸಂತೋಷ್ ಗುನಗಾ, ರಾಮಕೃಷ್ಣ ಗೌಡ, ತುಕು ಗೌಡ, ರಾಮಾ ಜಿ. ಗೌಡ, ಬಾಳಾ ಗೌಡ, ಮಿನಾಕರ ಗೌಡ, ಸತೀಷ ಗಾಂವಕಾರ, ರಾಮಾ ಎಸ್ ಗೌಡ, ಸಂತೋಷ ಗೌಡ, ಘನಶ್ಯಾಮ ಗೌಡ ಮತ್ತಿತರರು ಹಾಜರಿದ್ದರು.