ಗೋಕರ್ಣ: ಆತ ಜೀವನಾಧಾರಕ್ಕಾಗಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ. ಒಂದು ದಿನದ ಕೆಲಸವಾದರೂ ಸಿಕ್ಕೀತು ಎಂಬ ಆಸೆಯಿಂದ ಚಿರೆಕಲ್ಲು ಇಳಿಸಲು ಹೋಗಿದ್ದ. ಆದರೆ ವಿಧಿಯಾಟದಿಂದ ಕೆಲಸಕ್ಕೆ ಹೋದವನ ಪತ್ತೆಯೇ ಇಲ್ಲ. ಪಣಸಗುಳಿ ಸೇತುವೆ ದುರಂತದಲ್ಲಿ ಲಾರಿ ಉರುಳಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ, ಸುಳಿವೇ ಸಿಗದ ಹನೇಹಳ್ಳಿಯ ಯುವಕ ಸಂದೀಪ ಆಗೇರನ ದುರಂತ ಕಥೆ.
ಚಿಕ್ಕ ಗುಡಿಸಲಿನಲ್ಲಿ ಮಕ್ಕಳು ಪತ್ನಿಯೊಂದಿಗೆ ವಾಸವಿದ್ದ ಸಂದೀಪ ಸಾಣಿಕಟ್ಟಾ ಉಪ್ಪಿನ ಆಗರ, ಗೋಕರ್ಣದ ಹೊಟೇಲ್‍ಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮಳೆಗಾಲದಲ್ಲಿ ಬಿಡುವಿದ್ದ ಕಾರಣ ಊರಿನ ಸುತ್ತಮುತ್ತ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಅದರಂತೆ ಬುಧವಾರ ಕಲ್ಲು ತುಂಬಿ, ಇಳಿಸುವ ಕೆಲಸಕ್ಕೆ ಬರುವಂತೆ ಕರೆ ಬಂದಿದ್ದು, ಒಟ್ಟು ಐವರ ತಂಡದಲ್ಲಿ ಒಬ್ಬನಾಗಿ ತೆರಳಿದ್ದ.ಆದರೆ ಕಲ್ಲು ಇಳಿಸಿ ವಾಪಾಸ್ ಬರಬೇಕಾದರೆ ನೀರಿನ ರಭಸಕ್ಕೆ ಕಾರ್ಮಿಕ ಕೊಚ್ಚಿ ಹೋಗಿದ್ದಾನೆ.
ಇನ್ನು ಬಡ ಕೂಲಿ ಕಾರ್ಮಿಕರಲ್ಲಿ ಬಹುತೇಕರು ಬೇಸಿಗೆಯಲ್ಲಿ ವಿವಿಧ ಉಪ್ಪಿನ ಆಗರದಲ್ಲಿ ಕೆಲಸ ಮಾಡಿ ಬದಕು ಸಾಗಿಸುತ್ತಿದ್ದರು. ಮಳೆಗಾಲದಲ್ಲಿ ಮಾತ್ರ ಬೇರೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಲಾರಿ ಚಾಲಕನ ಹುಂಬತನಕ್ಕೆ ಬಡ ಕುಟುಂಬ ಸಂಕಷ್ಟಕ್ಕೆ ಸಿಲುಕಿರುವುದು ಬೇಸರದ ಸಂಗತಿ.
ಸಂದೀಪನ ಬಗ್ಗೆ ಸ್ಥಳೀಯರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೇ ದುಶ್ಚಟಗಳಿಲ್ಲದೆ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ದುರಂತದಲ್ಲಿ ಕಾಣೆಯಾಗಿರುವುದು ದುರದೃಷ್ಟಕರ ಎಂದಿದ್ದಾರೆ. ಆತ ಸುರಕ್ಷಿತವಾಗಿ ಮರಳಲಿ ಎಂದು ಗ್ರಾಮದವರು ದೇವರಲ್ಲಿ ಪ್ರಾರ್ಥಿಸುತ್ತೇವೆ ಎನ್ನುತ್ತಾರೆ. ಆದರೆ ವಿಧಿಯಾಟವೋ ಚಾಲಕನ ನಿರ್ಲಕ್ಷವೋ ಕೂಲಿ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಳ್ಳುವ ಹುಮ್ಮಸ್ಸು ಇರುವ ಯುವಕ ನೀರಿನಲ್ಲಿ ಕೊಚ್ಚಿ ಹೋಗಿರುವುದು ನಿಜಕ್ಕೂ ದುರಂತ.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕ್ಷೇತ್ರದಲ್ಲಿ ಈ ದುರ್ಘಟನೆ ನಡೆದಿದ್ದರಿಂದ ಸಚಿವರು ಈಗಾಗಲೇ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಆತನ ಕುಟುಂಬಕ್ಕೆ ಪರಿಹಾರ ಮತ್ತು ತ್ವರಿತ ಸಹಾಯ ನೀಡಿ ಬಡ ಕೂಲಿ ಕಾರ್ಮಿಕನ ಕುಟುಂಬದವರಿಗೆ ಆಸರೆಯಾಗಿ ನಿಲ್ಲಬೇಕಿದೆ.