ಹಾಸನ: ಹಾಡಹಗಲೇ ಇಬ್ಬರು ದುಷ್ಕರ್ಮಿಗಳು ಪಿಸ್ತೂಲ್ ಕೈಯಲ್ಲಿ ಹಿಡಿದು ಬಿಜೆಪಿ ನಾಯಕನ ಮನೆಗೆ ನುಗ್ಗಿರುವ ಘಟನೆ ನಗರದ ಕೆ.ಆರ್.ಪುರಂನಲ್ಲಿ ನಡೆದಿದೆ. ಬಿಜೆಪಿ ನಾಯಕ ಡಿ.ಟಿ.ಪ್ರಕಾಶ್ ಮನೆಗೆ ನಿನ್ನೆ ಮಧ್ಯಾಹ್ನ ಮಾಸ್ಕ್ ಧರಿಸಿ ಬಂದಿರುವ ಇಬ್ಬರು ಮನೆಯ ಬೆಲ್ ಮಾಡಿದ್ದಾರೆ. ಮನೆಯಲ್ಲಿ ಪ್ರಕಾಶ್ ತಾಯಿ ರಂಗಮ್ಮ ಮಾತ್ರ ಇದ್ದು ಬಾಗಿಲು ತೆರೆದ ವೇಳೆ, ಇದು ಜಯರಾಯಪಟ್ಟಣ ಪ್ರಕಾಶ್ ಅವರ ಮನೆನಾ ಎಂದು ಕೇಳಿದ್ದಾರೆ.
ನಾವು ಉದ್ದೂರಿನಿಂದ ಬಂದಿದ್ದೇವೆ ಅವರಿಗೆ ಒಂದು ಪಾರ್ಸೆಲ್ ಇದೆ ಎಂದು ರಂಗಮ್ಮ ಅವರಿಗೆ ಕವರ್ ಒಂದನ್ನು ನೀಡಿದ್ದಾರೆ. ರಂಗಮ್ಮ ಕವರ್ ಪಡೆದು ಮನೆಯೊಳಗೆ ಇಟ್ಟು ತಿರುಗುತ್ತಿದ್ದಂತೆ ಓರ್ವವ್ಯಕ್ತಿ ವೃದ್ದೆಯ ಕುತ್ತಿಗೆಗೆ ಕೈಹಾಕಿ ಹಣೆಗೆ ಪಿಸ್ತೂಲ್ ಇಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ರಂಗಮ್ಮ ಜೋರಾಗಿ ಕಿರುಚಾಡಿದ್ದು, ಕೂಡಲೇ ಕಾಂಪೌಂಡ್ ಹಾರಿ ಇಬ್ಬರು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಓರ್ವ ಚಪ್ಪಲಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.
ರಂಗಮ್ಮ ಕಿರುಚಾಟ ಕಂಡು ನೆರೆಹೊರೆಯವರು ಓಡಿ ಬಂದಿದ್ದಾರೆ. ಡಿ.ಟಿ.ಪ್ರಕಾಶ್ ಪತ್ನಿ ಸೌಮ್ಯ ಮಕ್ಕಳಿಗೆ ಊಟ ಕೊಡಲು ಶಾಲೆಗೆ ಹೋಗಿದ್ದು ಮನೆಗೆ ಬಂದು ಕವರ್ ತೆಗೆದು ನೋಡಿದಾಗ ಅದರಲ್ಲಿ ಇಟ್ಟಿಗೆ ಇರುವುದು ಗೊತ್ತಾಗಿದೆ. ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಾಡಹಗಲೇ ಡೆಲಿವರಿ ಬಾಯ್‌ಗಳ ರೂಪದಲ್ಲಿ ಗನ್ ಹಿಡಿದು ಮನೆಗೆ ನುಗ್ಗಿರುವುದು ಹಾಸನ ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಡಿ.ಟಿ.ಪ್ರಕಾಶ್ ಜೆಡಿಎಸ್‌ನಿಂದ ನಾಲ್ಕು ಬಾರಿ ಗ್ರಾ.ಪಂ. ಸದಸ್ಯರಾಗಿ, ಎರಡು ಬಾರಿ ಕಂದಲಿ ಗ್ರಾ.ಪಂ. ಅಧ್ಯಕ್ಷರಾಗಿದ್ದರು. ನಂತರ ಬಿಜೆಪಿ ಪಕ್ಷಕ್ಕೆ ಸೇರಿ ಜಿ.ಪಂ. ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ರಾಜಕೀಯದ ಜೊತೆ ರಿಯಲ್ ಎಸ್ಟೇಟ್ ಕೂಡ ನಡೆಸುತ್ತಿದ್ದಾರೆ.