ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ಮನವಿ

ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಸಚಿವ ಸಿಟಿ ರವಿಯನ್ನ ಭೇಟಿ ಮಾಡಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮನವಿ ಪತ್ರ ನೀಡಿದೆ. ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯರಿಗೂ ಮನವಿ ಪತ್ರ ನೀಡಿದೆ. ಮೈದಾನದಲ್ಲಿ 3 ದಿನ ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ಮನವಿ ಸಲ್ಲಿಸಲಾಗಿದೆ.

ಚಾಮರಾಜಪೇಟೆಯಲ್ಲಿರುವ 1 ನೇ ಮತ್ತು 2 ನೇ ಮುಖ್ಯರಸ್ತೆ ಹಾಗೂ 6 ಮತ್ತು 7 ನೇ ಅಡ್ಡರಸ್ತೆಯ ಕಂದಾಯ ಇಲಾಖೆಯ ಅಧೀನಕ್ಕೆ ಒಳಪಡುವ ಆಟದ ಮೈದಾನದಲ್ಲಿ ಆ 31 ರಿಂದ ಸೆ. 2 ರ ವರೆಗೆ ಗಣೇಶೋತ್ಸವವನ್ನು ಆಚರಿಸಲು ಒಕ್ಕೂಟ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಅನುಮತಿ ಕೋರಿ ಪತ್ರ ಬರೆಯಲಾಗಿದೆ.

ಸಂಸದರು ಹಾಗೂ ಸಚಿವರ ಅಂಗಳ ತಲುಪಿದ ಚಾಮರಾಜಪೇಟೆ ಗಣೇಶನ ಗಲಾಟೆ.!

ಚಾಮರಾಜಪೇಟೆಯಲ್ಲಿ ಸಂಸದರು ಹಾಗೂ ಸಚಿವರ ತೀರ್ಮಾನವೇ ಅಂತಿಮವಾಗುತ್ತಾ ಎಂಬುದು ಸದ್ಯಕ್ಕಿರುವ ಪ್ರಶ್ನೆಯಾಗಿದೆ. ಗಣೇಶನನ್ನು ಕೂರಿಸಲು ಒಕ್ಕೂಟ ಹಾಗೂ ಗಣೇಶ ಸಮಿತಿ ನಡುವೆ ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಚಾಮರಾಜಪೇಟೆ ನಾಗರೀಕ ಒಕ್ಕೂಟಕ್ಕೆ ಅವಕಾಶ ಕೊಡುವಂತೆ ಕೋರಿ ಪತ್ರ ಬರೆಯಲಾಗಿದೆ.

ಸಂಸದ ಪಿ.ಸಿ.ಮೋಹನ್ ಹಾಗೂ ಸಚಿವ ಆರ್.ಅಶೋಕ್‌ಗೆ ಪತ್ರ ಬರೆದ ನಾಗರೀಕ‌ ಒಕ್ಕೂಟ ನಾವು ಸ್ಥಳೀಯರೆಲ್ಲರೂ ಒಂದು ಗೂಡಿ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ. ಎಲ್ಲಾ ಸ್ಥಳೀಯ ಸಾರ್ವಜನಿಕರು ಸಂಘ ಸಂಸ್ಥೆಗಳು ಒಕ್ಕೂಟದ ಜೊತೆಗಿವೆ. ಒಕ್ಕೂಟದ ಮೂಲಕ ನಾವು ಅನೇಕ ಹೋರಾಟ ನಡೆಸುತ್ತಾ ಬಂದಿದ್ದೇವೆ. ಹೀಗಾಗಿ ಸ್ಥಳೀಯರು ಸಂಘ ಸಂಸ್ಥೆಗಳ ಒತ್ತಾಯದ ಮೇರೆಗೆ ನಾವೇ ಗಣೇಶ ಉತ್ಸವ ಮಾಡುತ್ತೇವೆ. 3 ದಿನಗಳ ಕಾಲ ಹಬ್ಬ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಇದಕ್ಕಾಗಿ ಅನುಮತಿ ಕೊಡಬೇಕೆಂದು ಸಂಸದರಿಗೆ ಹಾಗೂ ಸಚಿವರಿಗೆ ಪತ್ರ ಬರೆಯಲಾಗಿದೆ.

ಇತ್ತ ಸಂಸದ ಪಿಸಿ ಮೋಹನ್‌ ರನ್ನು ಭೇಟಿಯಾಗಿರೋ ಬೆಂಗಳೂರು ಗಣೇಶ ಉತ್ಸವ ಸಮಿತಿ ನಮಗೇ ಅವಕಾಶ ಕೊಡಬೇಕು ಎಂದು ಕೋರಿದೆ. ಹೀಗಾಗಿ ಗಣೇಶೋತ್ಸವ ಉಸ್ತುವಾರಿಯ ಒತ್ತಡ ಸಂಸದರು ಹಾಗೂ ಸಚಿವರ ಮೇಲೆ ಬಿದ್ದಿದ್ದು ಯಾರಿಗೆ ಒಲಿಯುತ್ತೆ ಗಣೇಶನನ್ನು ಕೂರಿಸೋ ಜವಾಬ್ದಾರಿ ಅನ್ನೋ ಪ್ರಶ್ನೆ ಮೂಡಿದೆ.