ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಕೊರತೆಯಿಂದ ಬರಗಾಲದ ಭೀತಿ ಎದುರಾಗಿದ್ದರೆ, ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 36 ಗಂಟೆಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.

ಕರ್ನಾಟಕದ ಒಳನಾಡಿನ ಹಲವೆಡೆ ಮಳೆಯಿಲ್ಲದೆ ರೈತರು ಬರಗಾಲದ ಆತಂಕದಲ್ಲಿದ್ದರೆ, ಇತ್ತ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದ 36 ಗಂಟೆಗಳಿಂದ ಜಿಲ್ಲಾದ್ಯಂತ ಬಿಡುವಿಲ್ಲದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ನಾಲ್ಕೂ ತಾಲೂಕುಗಳಲ್ಲಿ ಜನಜೀವನವನ್ನು ಸ್ತಬ್ಧಗೊಳಿಸಿದೆ. ಬಿರುಗಾಳಿ ಸಹಿತ ಸುರಿದ ಮಳೆಗೆ ಕುಮಟಾ – ಸಿದ್ದಾಪುರ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ಕುಮಟಾ ತಾಲೂಕಿನ ವಾಲಗಳ್ಳಿ ರಸ್ತೆಯ ಮೇಲೆ ಹಳ್ಳದಂತೆ ನೀರು ಹರಿದಿದ್ದರಿಂದ ದ್ವಿಚಕ್ರ ವಾಹನ ಸವಾರರು ಮುಂದೆ ಸಾಗಲಾರದೆ ರಸ್ತೆ ಬದಿಯಲ್ಲೇ ನಿಲ್ಲಬೇಕಾಯಿತು. ಬೃಹತ್ ವಾಹನಗಳು ಪ್ರಾಣದ ಹಂಗು ತೊರೆದು ನೀರಿನಲ್ಲೇ ಪರದಾಡುತ್ತಾ ಚಲಿಸಿದವು. ಇನ್ನು ಹೆದ್ದಾರಿ ಬದಿಯ ತಗ್ಗು ಪ್ರದೇಶದ ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗುವ ಭೀತಿ ಎದುರಾಗಿತ್ತಾದರೂ, ಅದೃಷ್ಟವಶಾತ್ ಮಳೆಯ ತೀವ್ರತೆ ಕೊಂಚ ಕಡಿಮೆಯಾದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಒಟ್ಟಾರೆಯಾಗಿ ಕಳೆದ 36 ಗಂಟೆಗಳ ಮಳೆ ಜಿಲ್ಲೆಯಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಮುಂದಿನ ದಿನಗಳಲ್ಲಿ ಮಳೆ ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಕೈಮೀರಬಹುದು ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದ್ದು, ಜಿಲ್ಲಾಡಳಿತವು ತಕ್ಷಣವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



