ಹೊನ್ನಾವರ :
ಖ್ಯಾತ ತಬಲಾ ಕಲಾವಿದರಾದ ಗೋಪಾಲಕೃಷ್ಣ ಗೋವಿಂದ ಹೆಗಡೆ ಕಲ್ಭಾಗ ಇವರ ಷಷ್ಠಬ್ಧಿಯ ನಿಮಿತ್ತ ಅಭಿನಂದನಾ ಸಮಾರಂಭ ಹಾಗೂ “ತಾಲ ಗೋಪಾಲ” ಅಭಿನಂದನಾ ಪುಸ್ತಕ ಬಿಡುಗಡೆ ಕಾರ್ಯಕ್ರಮ ಪ್ರಭಾತನಗರದ ಮೂಡಗಣಪತಿ ಸಭಾಭವನದಲ್ಲಿ ಶನಿವಾರ ನಡೆಯಿತು.

ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶಿರ್ವಚನ ನೀಡಿ, ತಾಲಕ್ಕೊಂದು ಮಾನ ನೀಡಬೇಕು. ಗೋಪಾಲಕೃಷ್ಣರಿಗೆ ಮಾಡಿದ ಸನ್ಮಾನದಿಂದ ತಾಲಕ್ಕೆ ಮಾನ ನೀಡಿದಂತಾಗಿದೆ. ತಾಲ-ಮಾನ ಶತಮಾನ ಆಗಬೇಕು.ಈ ಪರಂಪರೆ ಮುಂದುವರೆಯಲಿ ಎಂದು ಶುಭಹಾರೈಸಿದರು.ಗುರು ಆದವನು ಕಲಿತ ವಿದ್ಯೆ ಮಾರಿಕೊಂಡರೆ ವಿದ್ಯೆಗೆ ಘೋರ ಅಪಚಾರ ಮಾಡಿದಂತೆ.ಅದೇ ರೀತಿಯಲ್ಲಿ ಶಿಷ್ಯನಾದವನು ಸಹ ಗುರುವಿಗೆ ಕೃತಘ್ನನಾಗಿರಬೇಕು. ಇಲ್ಲದಿದ್ದರೆ ಕಲಿತ ವಿದ್ಯೆಗೆ ಅರ್ಥವೇ ಇಲ್ಲದಂತೆ. ವಿದ್ಯೆ ಎಂಬುವುದು ಮಾರಾಟದ ಸರಕಲ್ಲ. ಅದು ಮಾರಾಟವಾದರೆ ಉಳಿಯುವುದಿಲ್ಲ. ಭಾರತೀಯ ಸಂಸ್ಕೃತಿ ಉಳಿಯುವುದು ಇಂತಹ ವಿದ್ಯೆಗಳಿಂದ ಮಾತ್ರ ಎಂದರು.
ಸನ್ಮಾನ ಸ್ವೀಕರಿಸಿದ ಗೋಪಾಲಕ್ರಷ್ಣ ಹೆಗಡೆ ಕಲಬಾಗ ಮಾತನಾಡಿ,ವಿದ್ಯೆ ಕಲಿಸಿದ ಗುರು ಪಂಡಿತ್ ಪರಮೇಶ್ವರ್ ಹೆಗಡೆಯವರಿಗೆ,ಎಸ್ ಎಂ ಭಟ್ ಕಟ್ಟಿಗೆ ಹಾಗೂ ಹೆತ್ತವರಿಗೆ ನಾನು ಚಿರಋಣಿಯಾಗಿರುತ್ತೇನೆ.ಸಂಸ್ಥಾನದ ಗುರುಗಳು ಹಾಕಿಕೊಟ್ಟ ಮಾರ್ಗ ಜೀವನದ ಕೊನೆಯವರೆಗೂ ಇರುತ್ತದೆ. ನಮ್ಮ ಜೀವನಕ್ಕೆ ಸ್ಫೂರ್ತಿ ತುಂಬುವ ವ್ಯಕ್ತಿಗಳು ಬಂದಾಗ ಜೀವನದ ಜಂಜಾಟಗಳು, ಕಷ್ಟಗಳು ಮರೆಯಾಗುತ್ತದೆ.ಗುರು ಆದವ ವಿದ್ಯೆ ಜತೆ ಸಂಸ್ಕಾರ ನೀಡದಿದ್ದರೆ ಅದು ಅಪಾಯಕಾರಿ. ವಿದ್ಯೆ ಜತೆ ಸಂಸ್ಕಾರ ಸಿಕ್ಕಾಗ ಮಾತ್ರ ಆ ವಿದ್ಯೆಗೆ ಹೊಳಪು ಬರುತ್ತದೆ ಎಂದರು.
ಮೋಹನ ಹೆಗಡೆ ಹೆರವಟ್ಟಾ, ಅಭಿನಂದನಾ ನುಡಿಗಳನ್ನಾಡಿದರು. ವೆಂಕಟ್ರಮಣ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿಂದುಸ್ಥಾನಿ ಗಾಯಕರಾದ ಪಂಡಿತ ಗಣಪತಿ ಭಟ್ ಹಾಸಣಗಿ, ಪಂಡಿತ ಪರಮೇಶ್ವರ ಹೆಗಡೆ, ಪತ್ರಕರ್ತ ಬಿ. ಗಣಪತಿ, ಸಾಮವೇದ ವಿದ್ವಾಂಸರಾದ ವೇ. ಸುಬ್ರಹ್ಮಣ್ಯ ಭಟ್ ಉಂಚಗೇರಿ,ಹಿರಿಯ ಪತ್ರಕರ್ತರಾದ ಜಿ.ಯು. ಭಟ್, ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.
ಮುಂಜಾನೆಯಿಂದ ಸಂಜೆಯತನಕ ಅವರ ಗೌರವಾರ್ಥ ಗೋಪು ಹೆಗಡೆಯವರ ಹಿರಿಯ-ಕಿರಿಯ ಶಿಷ್ಯರು ವಾದನ ಮತ್ತು ಸಂಗೀತ ಕಾರ್ಯಕ್ರಮ ನೀಡಿದರು. ಗೋಪಾಲಕೃಷ್ಣ ಹೆಗಡೆಯವರ ಖ್ಯಾತ ಸಂಯೋಜನೆಯ ಲಯ-ಲಾಸ್ಯ ಕಾರ್ಯಕ್ರಮ, ಸಾಮವೇದ ಮತ್ತು ಸಂಗೀತದ ಪ್ರಾತ್ಯಕ್ಷಿಕೆ ಸಭಾಕಾರ್ಯಕ್ರಮದ ನಂತರ ಜಿಲ್ಲೆಯ ಪ್ರಸಿದ್ಧ ಗಾಯಕರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.
