ಭಟ್ಕಳ:
ಪಟ್ಟಣದ ಬಂದರ್ ರೋಡ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮೃತಪಟ್ಟಿದ್ದು, ಬೈಕ್ ಸವಾರನ ವಿರುದ್ಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಬೆಳಕೆ ಗ್ರಾಮದ ಗರಡಿ ಹಿತ್ತಲಿನ ಸುಮೇದ ನಾರಾಯಣ ನಾಯ್ಕ ಅವರು ಟಿವಿಎಸ್ ಅಪಾಚೆ ಬೈಕ್‌ನಲ್ಲಿ ಸಬ್ಬತ್ತಿಯ ಮಧುರ ಮಂಜುನಾಥ ನಾಯ್ಕ ಅವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಸಂಶುದ್ದೀನ್ ಸರ್ಕಲ್ ಕಡೆಯಿಂದ ಬಂದರ್ ರೋಡ್ ಕಡೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ಅನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದು, ಹಿಂಬದಿ ಸವಾರ ಮಧುರ ಮಂಜುನಾಥ ನಾಯ್ಕ ಅವರ ಎದೆ, ಸೊಂಟ ಹಾಗೂ ಕೈಗೆ ಗಂಭೀರ ಗಾಯಗಳಾಗಿದ್ದವು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೈಕ್ ಸವಾರ ಸುಮೇದ ನಾಯ್ಕ ಅವರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರ ಸಂಬಂಧಿ ಸಚಿನ್ ಗೋವಿಂದ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಸುಮೇದ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ. ಪಿಎಸ್‌ಐ ರವಿ ಗಾಂಜೇಕರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
