ಚಿಪ್ಪೆಕಲ್ಲು ದುರಂತ ಸಂತ್ರಸ್ತರಿಗೆ ನೆರವಿನ ಹಸ್ತ: ವಿಜಯ ಚಾರಿಟೇಬಲ್ ಟ್ರಸ್ಟ್‌ನಿಂದ ದಿನಸಿ ಸಾಮಗ್ರಿ ವಿತರಣೆ

ಭಟ್ಕಳ:
ತಾಲೂಕಿನ ಅಳ್ವೆಕೋಡಿ ಪ್ರದೇಶದಲ್ಲಿ ಚಿಪ್ಪೆಕಲ್ಲು ಸಂಗ್ರಹಿಸಲು ತೆರಳಿದ್ದ ವೇಳೆ ಸಂಭವಿಸಿದ ದುರಂತದಲ್ಲಿ 11 ಮಂದಿ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ವಿಜಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತೀರ್ಥಹಳ್ಳಿಯ ನಿಟ್ಟೂರಿನ ಶ್ರೀ ನಾರಾಯಣಗುರು ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿಗಳು ಸಂತ್ರಸ್ತ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಸಂಕಷ್ಟದ ಸಂದರ್ಭದಲ್ಲಿ ಸಮಾಜವು ನೋವಿನಲ್ಲಿರುವ ಕುಟುಂಬಗಳ ಬೆನ್ನಿಗೆ ನಿಲ್ಲಬೇಕು,ದುರ್ಘಟನೆಯಿಂದ ಜೀವನ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಅಗತ್ಯ ನೆರವು ನಿರಂತರವಾಗಿ ದೊರೆಯುವಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.


ವಿಜಯ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷೆ ದೀಪಾ ನಾಯ್ಕ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತ್ರಸ್ತ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಮಾನವೀಯ ಸ್ಪಂದನೆ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಸತ್ಯಜಿತ್ ಸೂರತ್ಕಲ್, ಶ್ರೀಧರ್ ನಾಯ್ಕ, ಪದ್ಮ ನಾಯ್ಕ, ರಾಘವೇಂದ್ರ, ರಾಜು ನಾಯ್ಕ, ಸಂತೋಷ್ ನಾಯ್ಕ, ಮಂಜು ನಾಯ್ಕ, ಮೋಹನ ಸೇರಿದಂತೆ ಸಾರದಹೊಳೆ ನಾಮಧಾರಿ ಸಮಾಜದ ಅಧ್ಯಕ್ಷರು, ಪ್ರಮುಖರು ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.