ಖರ್ವಾ ನಾಥಗೇರಿಯಲ್ಲಿ ಶ್ರೀ ಮಾಸ್ತಿದೇವಿ–ಯಕ್ಷಿ ದೇವಿ ವರ್ಧಂತಿ ಉತ್ಸವ ವಿಜೃಂಭಣೆ

ಹೊನ್ನಾವರ:
ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯ ಶ್ರೀ ಮಾಸ್ತಿದೇವಿ ಮತ್ತು ಯಕ್ಷಿ ದೇವಿ ದೇವಸ್ಥಾನದ 18ನೇ ವಾರ್ಷಿಕ ವರ್ಧಂತಿ ಉತ್ಸವ ವಿಜೃಂಭಣೆಯಿಂದ ಸಂಪನ್ನವಾಯಿತು.

ವರ್ಧಂತಿ ಉತ್ಸವ ನಿಮಿತ್ತ ಗಣಪತಿ ಪೂಜೆ, ಪುಣ್ಯಾಹ, ಕಲಶ ಸ್ಥಾಪನೆ, ಬಲಿ, ನವಗ್ರಹ ಹೋಮ, ಸ್ಥಾನಶುದ್ಧಿ ಹೋಮ, ಬಿಂಬಶುದ್ಧಿ ಹೋಮ, ಕಲಾವೃದ್ಧಿ ಹೋಮ, ಶ್ರೀ ಸತ್ಯಾನಾರಾಯಣ ವೃತ, ಬ್ರಹ್ಮಕಲಶಾಭಿಷೇಕ, ಪೂರ್ಣಾಹುತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಮೊಗೇಗಾರ ದತ್ತಾತ್ರೇಯ ಭಟ್ಟ ನೇತ್ರತ್ವದಲ್ಲಿ ನಡೆಯಿತು. ಉತ್ಸವ ಪ್ರಯುಕ್ತ ದೇವಿಗೆ ವಿಶೇಷ ಹೂವಿನ ಅಲಂಕಾರ ಸಮರ್ಪಿಸಲಾಯಿತು. ಅಭಯ ಹಸ್ತ ಪ್ರತಿಕಳಾಗಿ ದೇವಿ ಕಂಗೊಳಿಸುತ್ತಿದ್ದಳು.

ಗೇರುಸೊಪ್ಪಾದ ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ದೇವಿಯ ಪಲ್ಲಕ್ಕಿಯನ್ನು ದೇವಳಕ್ಕೆ ಕರೆತಂದು ಪೂಜೆ ಸಲ್ಲಿಸಲಾಯಿತು. ಊರಿನ ಹಾಗೂ ತಾಲೂಕಿನ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಶ್ರೀ ಸನ್ನಿಧಿಗೆ ಆಗಮಿಸಿ ಹಣ್ಣು-ಕಾಯಿ ಸೇವೆ ಸೇರಿದಂತೆ ವಿವಿಧ ಸೇವೆ ಸಲ್ಲಿಸಿ ಶ್ರೀ ಮಹಾಸತಿ ದೇವಿ ಮತ್ತು ಶ್ರೀ ಯಕ್ಷಿದೇವಿ ದರ್ಶನ ಪಡೆದು ಕೃತಾರ್ಥರಾದರು. ದೇವಾಲಯದ ಪ್ರಧಾನ ಅರ್ಚಕ ಗಣೇಶ ಗೌಡ ಅವರು ಶ್ರೀ ದೇವರ ಪೂಜಾ ಕೈಂಕರ್ಯ ನೆರವೇರಿಸಿದರು.

ಆಡಳಿತ ಮಂಡಳಿಯ ಅಧ್ಯಕ್ಷ ವಿಷ್ಣು ನಾಯ್ಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮಹಾಮಂಗಳಾರತಿ, ಪ್ರಸಾದ ವಿತರಣೆ ನಂತರ ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ನಡೆಯಿತು.