ಶ್ರೀರಾಮನವಮಿ ಹಿಂದೂ ಧರ್ಮದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ತ್ರೇತಾಯುಗದಲ್ಲಿ ಶ್ರೀ ರಾಮ ಅವರು ಅವತಾರಗೊಂಡ ದಿನವೆಂದು ಈ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ.

ಈ ವಿಶೇಷ ದಿನದಂದು ಪಾನಕ, ಹೆಸರುಬೇಳೆ ಮೊದಲಾದ ಪ್ರಸಾದಗಳನ್ನು ವಿತರಿಸಲಾಗುತ್ತದೆ. ಮನೆಗಳು ಮತ್ತು ದೇವಸ್ಥಾನಗಳಲ್ಲಿ ರಾಮಾಯಣ ಪಾರಾಯಣ, ಭಜನೆಗಳು ಹಾಗೂ “ಶ್ರೀ ರಾಮ ಜಯ ರಾಮ ಜಯ ಜಯ ರಾಮ” ಎಂಬ ಮಂತ್ರ ಜಪ ನಡೆಯುತ್ತದೆ. ಈ ಪೂಜೆ-ಪಠಣಗಳಿಂದ ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ಸಮೃದ್ಧಿ ಲಭಿಸುತ್ತದೆ ಎಂಬ ನಂಬಿಕೆ ಇದೆ. ಹಬ್ಬದ ಮೂಲ ಸಂದೇಶ ಸತ್ಯತೆ, ತಾಳ್ಮೆ ಮತ್ತು ಸಹನೆಯ ಜೀವನ ಮೌಲ್ಯಗಳನ್ನು ಅನುಸರಿಸುವುದಾಗಿದೆ.

ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಶ್ರೀರಾಮ ನವಮಿಯೂ ಒಂದು. ತ್ರೇತಾಯುಗದಲ್ಲಿ ಶ್ರೀ ಮಹಾವಿಷ್ಣು ಮರ್ಯಾದಾ ಪುರುಷೋತ್ತಮನಾಗಿ ಅವತರಿಸಿದ ದಿನವೇ ಈ ಶ್ರೀರಾಮ ನವಮಿ. ರಾಮ ನವಮಿಯನ್ನು ಮಾರ್ಚ್ 26 ರಂದು ಆಚರಿಸಲಾಗುವುದು, ಆದರೆ ಮಹಾ ನವಮಿಯನ್ನು ಮಾರ್ಚ್ 27 ರಂದು ಆಚರಿಸಲಾಗುವುದು. ಅದು ಯಾಕೆ ಅಷ್ಟಮಿ ದಿನ ರಾಮನವಮಿಯನ್ನು ಆಚರಿಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.
ಪಂಚಾಂಗದ ಪ್ರಕಾರ, ನಿನ್ನೆ ರಾತ್ರಿ 11 ಗಂಟೆ 48 ನಿಮಿಷಕ್ಕೆ ನವಮಿ ಪ್ರಾರಂಭವಾಗಿ, ಇಂದು ಬೆಳಿಗ್ಗೆ 10 ಗಂಟೆ 6 ನಿಮಿಷಕ್ಕೆ ಮುಕ್ತಾಯಗೊಂಡರೂ, ಸೂರ್ಯೋದಯದಲ್ಲಿ ಯಾವ ತಿಥಿ ಇರುತ್ತದೆಯೋ, ಅಂದೇ ಆ ಸಂಪೂರ್ಣ ದಿನವನ್ನು ಆಚರಿಸುವ ಸಂಪ್ರದಾಯವಿದೆ. ಹಾಗಾಗಿ ಇಂದು ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತಿದೆ. ಅಲ್ಲದೆ, ಇಂದು ಮಧ್ಯಾಹ್ನ 3 ಗಂಟೆ 24 ನಿಮಿಷದ ತನಕ ಪುನರ್ವಸು ನಕ್ಷತ್ರವೂ ಇರುವುದು ವಿಶೇಷ. ಇದು ಸಾಕ್ಷಾತ್ ಶ್ರೀರಾಮಚಂದ್ರರ ಜನ್ಮದಿನ.
ಶ್ರೀರಾಮ ನವಮಿ ಆಚರಣೆಗಳು ಹಳ್ಳಿಗಳಿಂದ ಹಿಡಿದು ದೇಶಾದ್ಯಂತ ವಿವಿಧ ರೂಪಗಳಲ್ಲಿ ನಡೆಯುತ್ತವೆ. ಈ ಸಂದರ್ಭದಲ್ಲಿ ಪಾನಕ, ಹೆಸರುಬೇಳೆ, ಪ್ರಸಾದ, ನೈವೇದ್ಯಗಳನ್ನು ಸಿದ್ಧಪಡಿಸಿ ವಿತರಿಸಲಾಗುತ್ತದೆ. ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬ ಮಂತ್ರವನ್ನು ಪಠಿಸುವುದು ಈ ದಿನದ ಪ್ರಮುಖ ಆಚರಣೆಗಳಲ್ಲಿ ಒಂದು. ಕೇವಲ ಈ ಮಹಾಮಂತ್ರವನ್ನು ಪಠಿಸುವುದರಿಂದ ವಿಷ್ಣು ಸಹಸ್ರನಾಮವನ್ನು ಸಂಪೂರ್ಣವಾಗಿ ಓದಿದ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ: ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ, ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ. ಕೆಲವು ಪ್ರದೇಶಗಳಲ್ಲಿ ಶೋಭಾಯಾತ್ರೆಗಳನ್ನು ಆಯೋಜಿಸಲಾಗುತ್ತದೆ. ರಾಮನ, ಸೀತೆಯ, ಲಕ್ಷ್ಮಣನ, ಹನುಮನ ವೇಷಧಾರಿಗಳು ಮೆರವಣಿಗೆಗಳಲ್ಲಿ ಪಾಲ್ಗೊಂಡು ಭಕ್ತರನ್ನು ರಂಜಿಸುತ್ತಾರೆ.
