ಹೊನ್ನಾವರ ಜ.21: ತಾಲೂಕಿನ ಶರಾವತಿ ನದಿಯ ಬಳ್ಕೂರು ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ತಹಶೀಲ್ದಾರರು ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ದಾಳಿಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಬಳ್ಕೂರು ಫಿರ್ಕಾ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಸಂಗ್ರಹಣೆ ಹಾಗೂ ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಹೊನ್ನಾವರ ತಹಶೀಲ್ದಾರ ಪ್ರವೀಣ ಕರಾಂಡೆ ಅವರ ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಈ ವೇಳೆ ಸುಮಾರು 60–70 ಬರಸ್‌ಗಳಷ್ಟು, ಅಂದಾಜು 20 ಲೋಡ್ ಆಗುವಷ್ಟು ಅನಧಿಕೃತ ಮರಳು ಸಂಗ್ರಹ ಪತ್ತೆಯಾಗಿ ವಶಕ್ಕೆ ಪಡೆಯಲಾಯಿತು.

ವಶಪಡಿಸಿಕೊಂಡ ಮರಳನ್ನು ಪೊಲೀಸ್ ಭದ್ರತೆಯೊಂದಿಗೆ ಸ್ಥಳೀಯ ಗ್ರಾಮ ಪಂಚಾಯತದ ಸುಪರ್ದಿಗೆ ವಹಿಸಲಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕ್ರಿಯೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿ ಕಾರ್ಯಾಚರಣೆಯಲ್ಲಿ ಮಂಕಿ ಕಂದಾಯ ನಿರೀಕ್ಷಕರು, ಮಂಕಿ ಪೊಲೀಸ್ ಠಾಣೆಯ ಸಿಬ್ಬಂದಿ, ಬಳ್ಕೂರು ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮ ಸಹಾಯಕರು ಭಾಗವಹಿಸಿದ್ದರು.
ಅಕ್ರಮ ಮರಳು ಸಂಗ್ರಹಣೆ ಮತ್ತು ಪರಿಸರ ಹಾನಿಗೆ ಕಾರಣವಾಗುವ ಚಟುವಟಿಕೆಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೊನ್ನಾವರ ತಹಶೀಲ್ದಾರರು ಎಚ್ಚರಿಕೆ ನೀಡಿದ್ದಾರೆ.

