ಭಕ್ತರ ಅನುಕೂಲಕ್ಕಾಗಿ: ರಾಮ ಮಂದಿರ 15 ಕಿಮೀ ಪ್ರದೇಶದಲ್ಲಿ ಮಾಂಸಾಹಾರ ನಿಷೇಧ

ಲಕ್ನೋ: ಅಯೋಧ್ಯೆ ಆಡಳಿತ ಮಂಡಳಿಯು ರಾಮ ಮಂದಿರದ 15 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸಾಹಾರ ಪದಾರ್ಥಗಳ ವಿತರಣೆಯನ್ನ ನಿಷೇಧಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನ್‌ ವೇದಿಕೆಗಳ ಮೂಲಕ ಪದೇ ಪದೇ ಮಾಂಸಾಹಾರ ಪದಾರ್ಥಗಳನ್ನ ಪೂರೈಕೆ ಮಾಡುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಕೇಳಿಬಂದ ಹಿನ್ನೆಲೆ ʻಪಂಚಕೋಶ ಪರಿಕ್ರಮʼದ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.  ಅಯೋಧ್ಯೆಯಲ್ಲಿನ ಕೆಲವು ಹೋಟೆಲ್‌ಗಳು ಮತ್ತು ಹೋಂ ಸ್ಟೇಗಳು ಅತಿಥಿಗಳಿಗೆ ಮಾಂಸಾಹಾರ ಮತ್ತು ಮದ್ಯ ಪೂರೈಕೆ ಮಾಡುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ. ಅಂತಹ ಚಟುವಟಿಕೆಗಳಿಂದ ದೂರ ಇರುವಂತೆ ಅಧಿಕಾರಿಗಳು ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಿರ್ಧಾರವಾದರೂ ನಿಷೇಧ ಹೇರಿಲ್ಲ!
ಅಯೋಧ್ಯೆ ಮತ್ತು ಫೈಜಾಬಾದ್ ಸಂಪರ್ಕಿಸುವ ಮಾರ್ಗವಾದ 14 ಕಿಮೀ ʻರಾಮ ಪಥʼದಲ್ಲಿ ಮದ್ಯ ಮತ್ತು ಮಾಂಸ ಮಾರಾಟ ನಿಷೇಧಿಸಲು ಅಯೋಧ್ಯೆ ಪುರಸಭೆ ಮೇ 2025 ರಲ್ಲಿ ನಿರ್ಧಾರ ತೆಗೆದುಕೊಂಡಿತ್ತು. ಆದ್ರೆ 9 ತಿಂಗಳೂ ಕಳೆದರೂ ಈ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿರಲಿಲ್ಲ. ಇದರಿಂದ ಸುಮಾರು 20ಕ್ಕೂ ಹೆಚ್ಚು ಮಳಿಗೆಗಳು ಈ ಪ್ರದೇಶದಲ್ಲಿ ಮದ್ಯ ಮಾರಾಟ ಮಾಡುತ್ತಿವೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದರು.