ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣ – ಆಸ್ಕರ್ ವೇದಿಕೆಯಲ್ಲಿ ‘ಕಾಂತಾರ: ಚಾಪ್ಟರ್ 1’

ಆಸ್ಕರ್ ವೇದಿಕೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಸದ್ದು ಮಾಡುವ ಸಮಯದ ಹತ್ತಿರ ಬರುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಆಸ್ಕರ್ ವೇದಿಕೆ​ಗೆ ಪ್ರವೇಶಿಸಿದೆ. ʻಮಹಾವತಾರ್‌ ನರಸಿಂಹʼ ಹಾಗೂ ʻಕಾಂತಾರ: ಅಧ್ಯಾಯ 1ʼ ಚಿತ್ರಗಳು ಅಧಿಕೃತವಾಗಿ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿವೆ. ಇದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ಹಾಗೂ ಐತಿಹಾಸಿಕ ಕ್ಷಣವಾಗಿದೆ.

ಕಳೆದ ವರ್ಷ ‘ಕಾಂತಾರ-1’ ಹಾಗೂ ‘ಮಹಾವತಾರ್‌ ನರಸಿಂಹ’ ಚಿತ್ರಗಳು ತೆರೆಕಂಡು ಜನಮನ ಗೆದ್ದಿದ್ದವು. ಕೋಟಿ ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದವು. ಚಿತ್ರಗಳನ್ನ ಆಸ್ಕರ್ ವೇದಿಕೆಗೆ ಕೊಂಡೊಯ್ಯುವ ಪ್ರಯತ್ನ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಹೇಳಿತ್ತು. ಆನಿಮೇಟೆಡ್ ಸಿನಿಮಾ ವಿಭಾಗದಲ್ಲಿ ‘ಮಹಾವತಾರ್‌ ನರಸಿಂಹ’ ಚಿತ್ರಕ್ಕೆ ಪ್ರಶಸ್ತಿ ಗ್ಯಾರಂಟಿ ಎನ್ನಲಾಗ್ತಿದೆ. ಈ ವರ್ಷದ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಕಾಣಿಸಿಕೊಂಡ 5 ಭಾರತೀಯ ಚಿತ್ರಗಳಲ್ಲಿ 2 ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ಸಿನಿಮಾ ಅನ್ನೋದು ಮತ್ತೊಂದು ವಿಶೇಷ.

ಇದೀಗ ‘ಕಾಂತಾರ ಚಾಪ್ಟರ್‌ – 1 ಹಾಗೂ ʻಮಹಾವತಾರ್‌ ನರಸಿಂಹʼ ಎರಡೂ ಚಿತ್ರಗಳು ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಜಾಗ ಮಾಡಿಕೊಂಡು ಆಸ್ಕರ್ ವಿಭಾಗದಲ್ಲಿ ಪರಿಗಣನೆಗೆ ಒಳಪಟ್ಟಿರುವುದು ಸಂತಸದ ಸಂಗತಿ.

ಈವರೆಗೆ ಭಾರತದ ಕೆಲ ಡಾಕ್ಯುಮೆಂಟರಿ, ಶಾರ್ಟ್‌ ಫಿಲ್ಮ್‌ಗಳಿಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಫೀಚರ್ ಸಿನಿಮಾಗಳ ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆಯಲು ಫಿಲ್ಮ್ ಮೇಕರ್ಸ್ ಪ್ರಯತ್ನಿಸುತ್ತಲೇ ಇದ್ದಾರೆ. ಭಾರತದಲ್ಲಿ ನಿರ್ಮಾಣವಾದ ಯಾವುದೇ ಚಿತ್ರಕ್ಕೆ ಆಸ್ಕರ್ ಸಿಕ್ಕಿಲ್ಲ. ಭಾರತೀಯ ಚಿತ್ರರಂಗದ ಈ ಎರಡೂ ಸಿನಿಮಾಗಳು ಈಗ ಹಾಲಿವುಡ್ ಸಿನಿಮಾಗಳ ಜೊತೆ ಆಸ್ಕರ್ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿವೆ