ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಮಹಾನಗರ ಪಾಲಿಕೆ ನಕಾರ: ಗಜಾನನ ಉತ್ಸವ ಸಮಿತಿಯಿಂದ ವಿನೂತನ ಪ್ರತಿಭಟನೆ

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲು ಮಹಾನಗರ ಪಾಲಿಕೆ ಮೀನಾಮೇಷ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಜಾನನ ಉತ್ಸವ ಸಮಿತಿ ಪಾಲಿಕೆ ವಿರುದ್ಧ ತೀವ್ರ ಹೋರಾಟ ಕೈಗೊಂಡಿದೆ.

ಸಾರ್ವಜನಿಕ ಅಭಿಪ್ರಾಯ ಪಡೆಯುವ ನಿಟ್ಟಿನಲ್ಲಿ ಸಹಿ ಸಂಗ್ರಹಣೆಗೆ ಮುಂದಾಗಿದೆ. ನಗರದ ದುರ್ಗದಬೈಲ್ ನಿಂದ ಪಾಲಿಕೆ ಕಚೇರಿಯ ವರೆಗೆ ಸಹಿಸಂಗ್ರಹಣಾ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಪ್ರಮೋದ್ ಮುತಾಲಿಕ್ ಚಾಲನೆ ನೀಡಿದರು. ‌

ಬಳಿಕ ಪಾಲಿಕೆಯ ಮುಖ್ಯ ಕಚೇರಿ ತಲುಪಿದ ಪ್ರತಿಭಟನಾಕಾರರು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಭಕ್ತಿ ಗೀತೆ, ಭಜನೆ, ಗಣೇಶ ಸೂಕ್ತಿ ಪಠಿಸಿ ಪಾಲಿಕೆ ಅಧಿಕಾರಿಗಳ ನಡೆಯನ್ನು ಅಣಕು ಪ್ರದರ್ಶನ ಮಾಡಿ ಸಮಾಧಾನ ಹೊರಹಾಕಿದರು.

ಬಳಿಕ ಕಮಿಷನರ್ ಡಾ ಗೋಪಾಲಕೃಷ್ಣ ಅವರಿಗೆ ಕೊನೆಯ ಗಡುವು ಮತ್ತು ಮನವಿ ಪತ್ರ ಜೊತೆಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒತ್ತಾಯಿಸಿ 1550 ಜನ ಸಹಿ ಮಾಡಿರುವ ಪತ್ರವನ್ನು ನೀಡಲಾಯಿತು. ಈ ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀರಾಮ ಸೇನಾ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳು ಭಾಗವಹಿಸಿದ್ದವು.