ಕಾಂಗ್ರೆಸ್ನ ಹಿರಿಯ ಮುತ್ಸದ್ದಿ ನಾಯಕ, ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ (94) ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ದಾವಣಗೆರೆಯಲ್ಲಿ ಇಂದು ಸಂಜೆ ನಡೆಯಲಿದೆ. ಬೆಂಗಳೂರಿನಿಂದ ನಸುಕಿನ ಜಾವ ಶಾಮನೂರರ ಪಾರ್ಥಿವ ಶರೀರ ದಾವಣಗೆರೆಗೆ ಆಗಮಿಸಿದೆ.

ಬೆಳಗ್ಗೆ 7 ರಿಂದ 12 ರ ವರೆಗೆ ಶಾಮನೂರ ಪುತ್ರ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಪಾರ್ಥಿವ ಶರೀರ ಇರಲಿದೆ. ಇಲ್ಲಿ ಕುಟುಂಬ ಸದಸ್ಯರಷ್ಟೆ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಪೂಜೆ ಸಲ್ಲಿಸಲಿದ್ದು, ಇಲ್ಲಿ ವಿವಿಐಪಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶವಿರಲಿದೆ. ಬಳಿಕ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಗರದ ಹೃದಯ ಭಾಗವಾದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ. ಅಲ್ಲಿಂದ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಆನೆಕೊಂಡದ ಶಾಮನೂರ ಮನೆತನದ ಕಲ್ಲೇಶ್ವರ ರೈಸ್ ಮಿಲ್ ಜಾಗಕ್ಕೆ ಕರೆತರಲಾಗುತ್ತದೆ. ಸಂಜೆ 5:30 ಸೂರ್ಯ ಮುಳುಗುವುದರ ಒಳಗಾಗಿ, ವೀರಶೈವ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ.
ಪತ್ನಿ ಸಮಾಧಿ ಪಕ್ಕದಲ್ಲೇ ಚಿರನಿದ್ರೆಗೆ ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪರ ಅಂತ್ಯಸಂಸ್ಕಾರಕ್ಕೆ ಕಲ್ಲೇಶ್ವರ ಮಿಲ್ನಲ್ಲಿ ಸಿದ್ಧತೆ ನಡೆದಿದೆ. ರಾತ್ರಿಯಿಂದಲೇ ಜೆಸಿಬಿಯಿಂದ ಸಮಾಧಿ ಗುಂಡಿ ತೆಗೆಯಲಾಗಿದೆ. ಶಾಮನೂರು ಶಿವಶಂಕರಪ್ಪ ತಂದೆ, ತಾಯಿ, ಸಹೋದರರು ಹಾಗೂ ಧರ್ಮಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಶಿವಶಂಕರಪ್ಪ ಅಂತ್ಯಸಂಸ್ಕಾರ ನಡೆಯಲಿದೆ.

