ಭಟ್ಕಳ: ತಾಲೂಕಾಡಳಿತ ಭಟ್ಕಳ, ಸಮಾಜ ಕಲ್ಯಾಣ ಇಲಾಖೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ವಿವಿಧ ಇಲಾಖೆಗಳು ಹಾಗು ದಿ ನ್ಯೂ ಇಂಗ್ಲಿಷ್ ಕಾಲೇಜು ಭಟ್ಕಳ ಸಹಯೋಗದೊಂದಿಗೆ 76ನೇ ವರ್ಷದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಬುಧವಾರ ನೆರವೇರಿತು.

ತಾಲೂಕಿನ ದಿ ನ್ಯೂ ಇಂಗ್ಲಿಷ್ ಕಾಲೇಜು ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಭಟ್ಕಳ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ರಾಜು ನಾಯ್ಕ ಭಾರತ ಸಂವಿಧಾನ ಜಗತ್ತಿನ ಅತಿ ದೊಡ್ಡ ಸಂವಿಧಾನವಾಗಿದೆ. 190 ವಿವಿಧ ತಿದ್ದುಪಡಿಯ ನಡುವೆಯೂ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಬಂದಿಲ್ಲ. ಮುಂದೆಯೂ ಸಾವಿರಾರು ವರ್ಷಗಳ ಕಾಲ ಸಂವಿಧಾನ ನಮ್ಮ ರಕ್ಷಣೆಗೆ ಇರಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಸಂವಿಧಾನ ನಮ್ಮ ಸರ್ವಶ್ರೇಷ್ಠ ಗ್ರಂಥವಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ನಡುವಿನ ಸಮನ್ವಯತೆಗೆ ಸಂವಿಧಾನವೇ ಕಾರಣವಾಗಿದೆ ಎಂದರು.

ಉಪನ್ಯಾಸಕ ಶ್ರೀನಿವಾಸ ಶಿವಾನಂದ ಭಟ್ಟ ಉಪನ್ಯಾಸ ನೀಡುತ್ತಾ, ನಮ್ಮ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಲು ಸಂವಿಧಾನ ಅಗತ್ಯವಾಗಿದೆ,
ನಮ್ಮ ಸಂವಿಧಾನದ ಆಚರಣೆಯ ಉದ್ದೇಶವೇನು ಎನ್ನುವುದನ್ನು ನಿಮ್ಮ ಮುಂದಿನ ತಲೆಮಾರಿಗೆ ತಿಳಿಸಿಕೊಡುವಂತಾಗಬೇಕು. ಮುಂದಿನ ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಒಂದಾಗಬೇಕು. ಎಲ್ಲರೂ ಏಕತಾಭಾವನೆಯಿಂದ ಮುಂದೆ ಸಾಗಬೇಕು.
ಸಂವಿಧಾನ ರಚನೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಕೊಡುಗೆ ದೊಡ್ಡದಿದೆ ಎಂದರು.
ತೋಟಗಾರಿಕಾ ಇಲಾಖೆಯ ಅಧಿಕಾರಿ ಶ್ರವಣಕುಮಾರ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರೇಣುಕಾಸ್ವಾಮಿ, ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಸಂಶುದ್ದೀನ್, ಹಿಂದುಳಿದ ವರ್ಗ ಇಲಾಖೆಯ ಪ್ರಭಾರ ವಿಸ್ತರಣಾಧಿಕಾರಿ ರಾಜು ನಾಯ್ಕ, ಶಿಶು ಹಾಗೂ ಮಹಿಳಾ ಅಭಿವೃದ್ಧಿ ಯೋಜನೆ ಇಲಾಖೆಯ ಸುಶೀಲಾ ಮೊಗೇರ, ದಿ ನ್ಯೂ ಇಂಗ್ಲಿಷ್ ಕಾಲೇಜು ಪ್ರಾಚಾರ್ಯ ವೀರೇಂದ್ರ ಶ್ಯಾನಭಾಗ ಮೊದಲಾದವರು ಉಪಸ್ಥಿತರಿದ್ದರು.



