ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ನ ಹಿರಿಯ ನಟ ಎಂ.ಎಸ್. ಉಮೇಶ್ ಇಂದು ಬೆಳಗ್ಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಕೆಲ ದಿನಗಳ ಹಿಂದೆ ಮನೆಯಲ್ಲಿ ಜಾರಿಬಿದ್ದು ಕಾಲು ಹಾಗೂ ಸೊಂಟಕ್ಕೆ ಗಂಭೀರ ಪೆಟ್ಟು ಮಾಡಿಕೊಂಡಿದ್ದ ಅವರು ತಕ್ಷಣವೇ ಆಸ್ಪತ್ರೆಗೆ ದಾಖಲೆಯಾಗಿದ್ದರು. ಚಿಕಿತ್ಸೆ ನಡೆಯುವ ವೇಳೆ ವೈದ್ಯರು ಅವರಲ್ಲಿ ಕ್ಯಾನ್ಸರ್ ಇರುವುದನ್ನು ಪತ್ತೆ ಹಚ್ಚಿದರು. ನಂತರ ಕಾಲಿಗೆ ಸರ್ಜರಿ ಮಾಡುವಾಗ ಲಿವರ್ ಕ್ಯಾನ್ಸರ್ ಇರುವುದೂ ದೃಢಪಟ್ಟಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಉಮೇಶ್ ಇಂದು ಅಂತಿಮ ಉಸಿರೆಳೆದಿದ್ದಾರೆ.

ಮೈಸೂರಿನಲ್ಲಿ ಜನನ: 1945ರ ಏಪ್ರಿಲ್ 22ರಂದು ಮೈಸೂರಿನಲ್ಲಿ ಜನಿಸಿದ ಉಮೇಶ್, ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಪ್ರಸಿದ್ಧ ಹಾಸ್ಯ ಕಲಾವಿದರು.
“ಅಯ್ಯಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಡ್ಬಿಟ್ಟ್ರಲ್ಲ…”,
“ನನ್ ಹೆಂಡ್ತಿ ಕೂಡಾ ಊರಲ್ಲಿಲ್ವೆ…”
ಹೀಗೆ ತಮ್ಮ ವಿಶಿಷ್ಟ ಮಾತನಾಡುವ ಶೈಲಿ, ಅಭಿನಯ, ಮುಖಭಾವಗಳಿಂದ ಪ್ರೇಕ್ಷಕರ ಮನ ಗೆದ್ದವರು.
ಹುಟ್ಟಿನಿಂದಲೇ ರಂಗಭೂಮಿಯ ನಂಟು , ತಂದೆ ಎ.ಎಲ್. ಶ್ರೀಕಂಠಯ್ಯ, ತಾಯಿ ನಂಜಮ್ಮ. ತೊಟ್ಟಿಲಿನಲ್ಲಿದ್ದಾಗಲೇ ರಂಗಪ್ರವೇಶ ಮಾಡಿದ ಉಮೇಶ್ ಬಾಲಪಾತ್ರಗಳಲ್ಲಿ ಅನುಭವ ಗಳಿಸಿದ್ದರು. ದೃಶ್ಯಕ್ಕೆ ತಕ್ಕಂತೆ ಅಭಿವ್ಯಕ್ತಿ ಬರಲೆಂದು ಅವರಿಗೆ ಕಲ್ಲು ಸಕ್ಕರೆ ಕೊಟ್ಟು ಪ್ರೋತ್ಸಾಹಿಸುತ್ತಿದ್ದರು ಎಂಬುದು ವಿಶೇಷ.
ಕೆ. ಹಿರಣ್ಣಯ್ಯ ಮಿತ್ರ ಮಂಡಲಿಯ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಿಜ್ಜಳನ ಮಗನ ಪಾತ್ರ—ಇದು ಉಮೇಶ್‌ಗೆ ‘ಬುದ್ಧಿ ಬಂದ’ ನಂತರದ ಮೊದಲ ಪ್ರಮುಖ ಪಾತ್ರ.
ಇದಕ್ಕೂ ಮುಂಚೆ ಅವರು ಗುಬ್ಬಿ ವೀರಣ್ಣನ ಕಂಪನಿಯಲ್ಲಿ ಬಾಲನಟನಾಗಿ ಹಲವು ನಾಟಕಗಳಲ್ಲಿ ಮಿಂಚಿದ್ದರು.
ದಶಾವತಾರ ನಾಟಕದಲ್ಲಿ ಪ್ರಹ್ಲಾದನ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಾಸ್ತಿಯವರು ಅವರಿಗೆ 10 ರೂಪಾಯಿ ಬಹುಮಾನ ನೀಡಿದ್ದರು.
ಗುಬ್ಬಿ ವೀರಣ್ಣ—ಉಮೇಶ್ ಅವರ ಮೊದಲ ಗುರು.
ಎಂ.ಸಿ. ಮಹಾದೇವಸ್ವಾಮಿ ಅವರ ಕನ್ನಡ ಥಿಯೇಟರ್ಸ್ ಕಂಪನಿಯಲ್ಲೂ ಅವರು ಬಾಲನಟರಾಗಿದ್ದರು.
ಉಮೇಶ್ ಒಬ್ಬ ನಟ ಮಾತ್ರವಲ್ಲ; ಪಿಯಾನೋ, ಹಾರ್ಮೋನಿಯಂ ವಾದನ, ಕುಂಚಕಲೆ, ಹಾಡುಗಾರಿಕೆ—ಎಲ್ಲದರಲ್ಲೂ ಪ್ರಾವೀಣ್ಯ ಹೊಂದಿದ್ದರು.
ಸಂದ ಪಡೆದ ಗೌರವಗಳು
- ಮುನಿತಾಯಿ ಚಿತ್ರದಲ್ಲಿನ ‘ತಿಮ್ಮರಾಯಿ’ ಪಾತ್ರಕ್ಕೆ ಸಂದ ಪ್ರಶಸ್ತಿ
- 1994 – ನಾಟಕ ಅಕಾಡಮಿ ಪ್ರಶಸ್ತಿ
- 1997 – ಮಹಾನಗರ ಪಾಲಿಕೆ ಪ್ರಶಸ್ತಿ
- ಆತ್ಮಚರಿತ್ರೆ **‘ಬಣ್ಣದ ಘಂಟೆ’**ಗೆ ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ
- 5 ದಶಕಗಳ ಅವರ ಅಭಿನಯ ಬದುಕಿಗೆ ಕನ್ನಡ ಚಿತ್ರರಂಗ ನೀಡಿದ ಅನೇಕ ಗೌರವಗಳು
