ಭಟ್ಕಳದ ಜಾಲಿ ಬೀಚ್‌ ಸಮೀಪದ ರೆಸಾರ್ಟ್‌ನ ಈಜುಕೊಳದಲ್ಲಿ 5 ವರ್ಷದ ಬಾಲಕ ಬಿದ್ದು ಸಾವನ್ನಪ್ಪಿದ ಘಟನೆ

ಭಟ್ಕಳ: ಜಾಲಿ ಬೀಚ್‌ ಸಮೀಪದ ರೆಸಾರ್ಟ್‌ನ ಈಜುಕೊಳದಲ್ಲಿ 5 ವರ್ಷದ ಬಾಲಕ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಮೃತ ಬಾಲಕನನ್ನು ಮೌಲವಿ ಶಾಹಿದುಲ್ಲಾಹ ಅವರ ಪುತ್ರ ಮೊಹಮ್ಮದ್ ಮುಸ್ತಾಕೀಮ್ ಶೈಖ್ (5) ಎಂದು ಗುರುತಿಸಲಾಗಿದೆ. ಬಾಲಕ ಸ್ಥಳೀಯ ಮದ್ರಸಾದ ಎಲ್‌ಕೆಜಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನೆಂದು ತಿಳಿದುಬಂದಿದೆ. ತಾಯಿ ಹಾಗೂ ತಂಗಿಯೊಂದಿಗೆ ರೆಸಾರ್ಟ್‌ಗೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ. ತಾಯಿ ಮುಂದಕ್ಕೆ ನಡೆದುಹೋಗುತ್ತಿದ್ದಾಗ ಗಮನ ತಪ್ಪಿದ ಕ್ಷಣದಲ್ಲಿ, ಸುಮಾರು ಐದು ಅಡಿ ಆಳದ ಈಜುಕೊಳಕ್ಕೆ ಬಾಲಕ ಜಾರಿ ಬಿದ್ದಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಘಟನೆಯನ್ನರಿತು ತಾಯಿ ತಕ್ಷಣ ನೀರಿಗೆ ಇಳಿ ಮಗನನ್ನು ಮೇಲಕ್ಕೆತ್ತಿದ್ದು, ಹೊರಗಿದ್ದ ಕೆಲ ಯುವಕರು ಸಹ ರಕ್ಷಣೆಗೆ ಮುಂದಾಗಿದ್ದರು. ಸಿಪಿಆರ್ ನೀಡಿ ನೀರು ಹೊರತೆಗೆದರೂ ಜೀವ ಉಳಿಸಲು ಸಾಧ್ಯವಾಗಿಲ್ಲ. ಬಳಿಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಆಗಲೇ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಬಾಲಕನ ದೇಹವನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.