ಅಂಕೋಲಾ: ಉಳೂವರೆ ಗ್ರಾಮದ ನಿವಾಸಿ ಹಾಗೂ ಅಂಕೋಲಾ ಕೆ.ಇ.ಬಿ. ಇಲಾಖೆಯಲ್ಲಿ ಲೈನ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮಣ ಸುಕ್ರು ಗೌಡ (57) ಅವರು ಜೇನುನೊಣ ಕಚ್ಚಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದುರ್ಘಟನೆ ನವೆಂಬರ್ 12, 2025 ರಂದು ನಡೆದಿದೆ.
ಮಾದನಗೇರಿಯಿಂದ ಗುಂಡಬಾಳದವರೆಗೆ ಲೈನ್ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಗೌಡ ಅವರು ಬುಧವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಗುಂಡಬಾಳದಲ್ಲಿ ಲೈನ್ ಕೆಲಸ ನಿರ್ವಹಿಸುತ್ತಿದ್ದಾಗ ಜೇನುನೊಣಗಳು ಅವರ ತಲೆಗೆ ಕಚ್ಚಿವೆ. ಬಳಿಕ ಮನೆಗೆ ವಾಪಸ್ ಬಂದ ಅವರು ವಿಶ್ರಾಂತಿ ಪಡೆಯುತ್ತಿದ್ದಾಗ ಪ್ರಜ್ಞೆ ತಪ್ಪಿದ್ದು, ಬಾಯಲ್ಲಿ ನೊರೆ ಕಾಣಿಸಿಕೊಂಡಿದೆ.

ಕುಟುಂಬಸ್ಥರು ತಕ್ಷಣ ಅವರನ್ನು ಆಟೋದಲ್ಲಿ ಮಾದನಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಕುಮಟಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ವೈದ್ಯರು ಮಧ್ಯಾಹ್ನ 3.55ಕ್ಕೆ ಲಕ್ಷ್ಮಣ ಗೌಡ ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು.
ಈ ಕುರಿತು ಮೃತರ ಪತ್ನಿ ಗಂಗಾದೇವಿ ಲಕ್ಷ್ಮಣ ಗೌಡ (50) ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆ ದೂರಿನ ಆಧಾರದ ಮೇಲೆ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಕೋಲಾ ಠಾಣೆಯ ಸಿಬ್ಬಂದಿ ರವಿಕುಮಾರ ಗೌಡ (CHC-858) ಅವರು ಎಫ್‌ಐಆರ್ ದಾಖಲಿಸಿದ್ದಾರೆ. ಈ ದುರ್ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಲೈನ್ ಕೆಲಸದ ವೇಳೆ ಎದುರಾಗುವ ಅಪಾಯಗಳ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.



