ತುಮಕೂರು: ಸಚಿವ ಸ್ಥಾನದಿಂದ ವಜಾಗೊಂಡ ನಂತರ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದಂತೆ ಕಾಣುತ್ತಿದ್ದಾರೆ. “ಯಾವ ಪಕ್ಷದ ಬಾವುಟ ಹಿಡಿಯಬೇಕು ಎಂಬುದನ್ನು ನಾನು ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇನೆ,” ಎಂದು ಅವರು ಸಾರ್ವಜನಿಕವಾಗಿ ಹೇಳಿದ್ದು, ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಧುಗಿರಿ ತಾಲೂಕಿನ ದೊಡ್ಡೆರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ರಾಜಣ್ಣ ಹೇಳಿದರು — “ಹಿಂದೆ ನಾನು ಮಧುಗಿರಿ ಕ್ಷೇತ್ರಕ್ಕೆ ಬಂದಾಗ ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಹಿಡಿದು ರ್ಯಾಲಿ ನಡೆಸುತ್ತಿದ್ದರು. ಆದರೆ ಇಂದು ರ್ಯಾಲಿಯಲ್ಲಿ ಯಾರೂ ಕಾಂಗ್ರೆಸ್ ಬಾವುಟ ಹಿಡಿದಿಲ್ಲ. ಅವರಿಗೂ ಪಕ್ಷದ ಮೇಲಿನ ಬೇಸರ ಗೋಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಯಾವ ಬಾವುಟ ಹಿಡಿಯಬೇಕು ಎನ್ನುವುದನ್ನು ನಂತರ ತೀರ್ಮಾನಿಸುತ್ತೇನೆ,” ಎಂದರು.
ಇಷ್ಟಕ್ಕೆ ನಿಂತಿರದೆ, ರಾಜಣ್ಣ ಮತ್ತಷ್ಟು ಸ್ಪಷ್ಟವಾಗಿ ಮಾತನಾಡಿದರು: “2004ರಲ್ಲಿ ಕಾಂಗ್ರೆಸ್ ಪಕ್ಷ ನನ್ನನ್ನು ಗೌರವದಿಂದ ಕಾಣಲಿಲ್ಲ. ಆಗ ನಾನು ಜೆಡಿಎಸ್‌ನಿಂದ ಸ್ಪರ್ಧಿಸಿ, ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷವನ್ನು ಕ್ಲೀನ್ ಬೋಲ್ಡ್ ಮಾಡಿದ್ದೆವು. ಆಗ ನಾವು ಕಾಂಗ್ರೆಸ್‌ನನ್ನು ಸಂಪೂರ್ಣವಾಗಿ ಮುಗಿಸಿದ್ದೆವು. ಇದೇ ರೀತಿಯ ಸಂದರ್ಭ ಮತ್ತೆ ಬರಬಹುದೇನೋ!” ಎಂದು ಹೇಳಿದರು.
