ಶಂಕರ್ ನಾಗ್ ಜನ್ಮದಿನವನ್ನು ‘ಚಾಲಕರ ದಿನ’ವಾಗಿ ಘೋಷಿಸಲು ಆಗ್ರಹ

ಬೆಂಗಳೂರು, ನವೆಂಬರ್ 7: ಮೇರು ನಟ ದಿವಂಗತ ಶಂಕರ್ ನಾಗ್ ಅವರ ಜನ್ಮದಿನದ ಅಂಗವಾಗಿ, ಆಟೋ ಚಾಲಕರ ಸಂಘಟನೆಗಳು 12ನೇ ವರ್ಷದ ‘ಚಾಲಕರ ದಿನಾಚರಣೆ’ಯನ್ನು ನವೆಂಬರ್ 9ರಂದು ಜಯನಗರದ 5ನೇ ಬ್ಲಾಕ್‌ನ ಶಾಲಿನಿ ಮೈದಾನದಲ್ಲಿ ಭವ್ಯವಾಗಿ ಆಯೋಜಿಸಿವೆ. ಈ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಶುಕ್ರವಾರ (ನ. 7) ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪೀಸ್ ಆಟೋ, ವಿಷ್ಣುಸೇನಾ ಸಮಿತಿ ಹಾಗೂ ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಗಳು ಸಂಯುಕ್ತವಾಗಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರ ನೀಡಿದವು. ಶಂಕರ್ ನಾಗ್ ಅವರ ಜನ್ಮದಿನದ ಪ್ರಯುಕ್ತ ಹಂಪಿ ರಥದ ಮಾದರಿಯಲ್ಲಿ ಅಲಂಕರಿಸಿದ ಆಟೋಗೆ ಚಾಲನೆ ನೀಡಲಾಗಿದ್ದು, ಶಂಕರ್ ನಾಗ್ ಮತ್ತು ಡಾ. ವಿಷ್ಣುವರ್ಧನ್ ಅವರ ಚಿತ್ರವಿರುವ ಈ ರಥ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮೆರವಣಿಗೆ ನಡೆಸಲಿದೆ.

ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ರಘು ಎನ್. ನಾರಾಯಣ್ ಗೌಡ ಹೇಳಿದರು, “ಈ ಬಾರಿ ಚಾಲಕರ ದಿನಾಚರಣೆಗೆ ‘ಆಟೋ ರಾಯಭಾರಿ’ಯಾಗಿ ನಟಿ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿ ಸಹ ಶಂಕರ್ ನಾಗ್ ಅವರ ಜನ್ಮದಿನವನ್ನು ಚಾಲಕರ ದಿನವಾಗಿ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. 7 ಪ್ರಾಮಾಣಿಕ, ಹಿರಿಯ ಮತ್ತು ಮಹಿಳಾ ಆಟೋ ಚಾಲಕರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ,” ಎಂದರು.

ಆದರ್ಶ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ಎಂ. ಮಂಜುನಾಥ್ ಗೌಡ ಹೇಳಿದರು, “ಶಂಕರ್ ನಾಗ್ ಅವರ ದಿನಾಚರಣೆ ನಮ್ಮೆಲ್ಲರಿಗೂ ಹಬ್ಬದಂತದ್ದು. ಸುಮಾರು 4 ಸಾವಿರ ಆಟೋ ಮತ್ತು ಟ್ಯಾಕ್ಸಿ ಚಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲರಿಗೂ ಸಮವಸ್ತ್ರ ವಿತರಿಸಲಾಗುತ್ತದೆ. ನಟ ಅಜಯ್ ರಾವ್ ಇಬ್ಬರು ಚಾಲಕರಿಗೆ ಧನಸಹಾಯ ಮಾಡುವರು,” ಎಂದರು. ಅವರು ಮುಂದುವರಿಸಿ, “ಸಾರಿಗೆ ವ್ಯವಸ್ಥೆಯ ಆಧಾರವಾದ ಚಾಲಕರನ್ನು ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ಈ ದಿನಾಚರಣೆ ನಡೆಸುತ್ತಿದ್ದೇವೆ. ಈ ದಿನವನ್ನು ಸರ್ಕಾರವೇ ಅಧಿಕೃತವಾಗಿ ‘ಚಾಲಕರ ದಿನ’ ಎಂದು ಘೋಷಿಸಬೇಕು,” ಎಂದು ಆಗ್ರಹಿಸಿದರು.