ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿದ ಇಬ್ಬರು ಕನ್ನಡಿಗ ಬಿಲಿಯನೇರ್‌ಗಳು!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸಲು ಇಬ್ಬರು ಕನ್ನಡಿಗ ಬಿಲಿಯನೇರ್‌ಗಳು ಆಸಕ್ತಿ ತೋರಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಯುನೈಟೆಡ್ ಸ್ಪಿರಿಟ್ಸ್‌ ಸಂಸ್ಥೆ, ಡಿಯಾಜಿಯೋ ಒಡೆತನದ ಆರ್‌ಸಿಬಿಯನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಘೋಷಿಸಿದ ನಂತರ, ಹೊಸ ಖರೀದಿದಾರರ ಹುಡುಕಾಟ ಜೋರಾಗಿದೆ. ಈ ಪೈಕಿ ಕನ್ನಡದ ಇಬ್ಬರು ಶತಕೋಟ್ಯಧಿಪತಿಗಳು — ಜೆರೋಧಾ ಸಹ-ಸ್ಥಾಪಕ ನಿಖಿಲ್ ಕಾಮತ್ ಹಾಗೂ ಮಣಿಪಾಲ್ ಎಜುಕೇಶನ್ ಅಂಡ್ ಮೆಡಿಕಲ್ ಗ್ರೂಪ್‌ ಅಧ್ಯಕ್ಷ ರಂಜನ್ ಪೈ — ಆರ್‌ಸಿಬಿ ತಂಡದ ಖರೀದಿಯಲ್ಲಿ ಆಸಕ್ತಿ ತೋರಿರುವುದಾಗಿ ವರದಿಯಾಗಿದೆ.

ಆರ್‌ಸಿಬಿಯ ಮೂಲವೇ ಬೆಂಗಳೂರು ಆಗಿರುವುದರಿಂದ, ಕನ್ನಡಿಗ ಮಾಲೀಕರು ತಂಡವನ್ನು ಖರೀದಿಸಿದರೆ ಅದರ ಬ್ರ್ಯಾಂಡ್ ಮೌಲ್ಯ ಮತ್ತು ಸ್ಥಳೀಯ ಅಭಿಮಾನಿಗಳ ಸಂಪರ್ಕ ಮತ್ತಷ್ಟು ಬಲವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಸಿಇಒ ಅದಾರ್ ಪೂನವಾಲ್ಲಾ ಕೂಡ ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಈ ಮೂವರು ಒಟ್ಟಾಗಿ ಒಕ್ಕೂಟ ರೂಪಿಸಿ ಬಿಡ್ ಮಾಡುವ ಸಾಧ್ಯತೆಗಳಿವೆ.

ಆದರೆ ನಿಖಿಲ್ ಕಾಮತ್ ಹಾಗೂ ರಂಜನ್ ಪೈ ಈ ಬಗ್ಗೆ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಫೋರ್ಬ್ಸ್ ವರದಿ ಪ್ರಕಾರ, ರಂಜನ್ ಪೈ ಅವರ ನಿವ್ವಳ ಆಸ್ತಿ ಮೌಲ್ಯ 2.8 ಬಿಲಿಯನ್ ಡಾಲರ್ ಆಗಿದ್ದು, ಕಾಮತ್ ಅವರದ್ದು 2.5 ಬಿಲಿಯನ್ ಡಾಲರ್. ಪೂನವಾಲ್ಲಾ ಅವರ ಸಂಪತ್ತಿನ ಮೌಲ್ಯ ಸುಮಾರು 20 ಬಿಲಿಯನ್ ಡಾಲರ್.

ಐಪಿಎಲ್‌ ಬ್ರ್ಯಾಂಡ್ ಮೌಲ್ಯ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 17 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಗೆದ್ದಿರುವ ಆರ್‌ಸಿಬಿ ಈಗ ಅತ್ಯಂತ ಮೌಲ್ಯಯುತ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಹೌಲಿಹಾನ್ ಲೋಕಿ ವರದಿ ಪ್ರಕಾರ, ಆರ್‌ಸಿಬಿಯ ಮೌಲ್ಯ 269 ಮಿಲಿಯನ್ ಡಾಲರ್ (ಸುಮಾರು ₹2,300 ಕೋಟಿ) ಎಂದು ಅಂದಾಜಿಸಲಾಗಿದೆ. ಪುರುಷರ ಹಾಗೂ ಮಹಿಳೆಯರ ತಂಡಗಳು ಎರಡೂ ಚಾಂಪಿಯನ್ ಪಟ್ಟ ಗಳಿಸಿರುವುದರಿಂದ ಇದರ ಬ್ರ್ಯಾಂಡ್ ಮೌಲ್ಯ ಹೆಚ್ಚಾಗಿದೆ.

ಮೌಲ್ಯಯುತ ಐಪಿಎಲ್ ಫ್ರಾಂಚೈಸಿಗಳು:

  • ರಾಯಲ್ ಚಾಲೆಂಜರ್ಸ್ ಬೆಂಗಳೂರು – 269 ಮಿಲಿಯನ್ ಡಾಲರ್
  • ಮುಂಬೈ ಇಂಡಿಯನ್ಸ್ – 242 ಮಿಲಿಯನ್ ಡಾಲರ್
  • ಚೆನ್ನೈ ಸೂಪರ್ ಕಿಂಗ್ಸ್ – 235 ಮಿಲಿಯನ್ ಡಾಲರ್
  • ಪಂಜಾಬ್ ಕಿಂಗ್ಸ್ – 141 ಮಿಲಿಯನ್ ಡಾಲರ್

ಒಟ್ಟಾರೆ ಐಪಿಎಲ್ ಬ್ರ್ಯಾಂಡ್ ಮೌಲ್ಯ 3.9 ಬಿಲಿಯನ್ ಡಾಲರ್ ಆಗಿದ್ದು, ಹಿಂದಿನ ವರ್ಷಕ್ಕಿಂತ 13.8% ಏರಿಕೆಯಾಗಿದೆ. ಎಲ್ಲ ತಂಡಗಳು ಮತ್ತು ವ್ಯವಹಾರಗಳನ್ನು ಸೇರಿಸಿ, ಐಪಿಎಲ್ ಎಂಟರ್‌ಪ್ರೈಸಸ್ ಒಟ್ಟಾರೆ ಮೌಲ್ಯ 18.5 ಬಿಲಿಯನ್ ಡಾಲರ್ ಆಗಿದೆ. ಆರ್‌ಸಿಬಿ ಖರೀದಿಗೆ ಅಮೆರಿಕ ಮೂಲದ ಖಾಸಗಿ ಹೂಡಿಕೆ ಸಂಸ್ಥೆ, ಅದಾನಿ ಗ್ರೂಪ್, ಜಿಂದಾಲ್ ಕುಟುಂಬದ ನೇತೃತ್ವದ ಜೆಎಸ್‌ಡಬ್ಲ್ಯೂ ಗ್ರೂಪ್ ಹಾಗೂ ದೇವಯಾನಿ ಇಂಟರ್‌ನ್ಯಾಷನಲ್ ಗ್ರೂಪ್‌ನ ರವಿ ಜೈಪುರಿಯಾ ಕೂಡ ಆಸಕ್ತಿ ತೋರಿರುವುದಾಗಿ ವರದಿಯಾಗಿದೆ.