ಬೆಂಗಳೂರು, ಅಕ್ಟೋಬರ್ 13: ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಅಧಿಕಾರ ಹಂಚಿಕೆ ಕುರಿತ ಚರ್ಚೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ಆಪ್ತ ಸಚಿವರೊಂದಿಗೆ ಭೋಜನ ಕೂಟ ನಡೆಸಲಿದ್ದಾರೆ. ಇತ್ತ ಕೆಲ ದಿನಗಳ ಹಿಂದಷ್ಟೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎಂದು ಶಾಸಕ ಇಕ್ಬಾಲ್ ಅಹ್ಮದ್ ಹೇಳಿದ್ದರೆ, ಇದೀಗ ಗೃಹ ಸಚಿವ ಡಾ. ಜಿ. ಪರಮೇಶ್ವರ್ “ನಾನೂ ಸಿಎಂ ಆಗಬಾರದೇ? ನನಗೂ ಬಯಕೆ ಇದೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಅವರ ನಿರ್ಧಾರಕ್ಕೆ ಬಿಟ್ಟಿರುವುದಾಗಿ ಸ್ಪಷ್ಟಪಡಿಸಿದರು. “ಸಚಿವರಾಗುವ ಆಸೆ ಎಲ್ಲ ಶಾಸಕರಲ್ಲೂ ಇರುತ್ತದೆ. ಮುಖ್ಯಮಂತ್ರಿಗಳು ಅಥವಾ ಸಚಿವರು ಭೋಜನ ಕೂಟ ಆಯೋಜಿಸುವುದು ಸಾಮಾನ್ಯ ವಿಷಯ. ಬಿಜೆಪಿ ಈ ವಿಚಾರದಲ್ಲಿ ತಲೆಹಾಕಬೇಕಾದ ಅಗತ್ಯವಿಲ್ಲ. ಪ್ರತಿ ಅಧಿವೇಶನಕ್ಕೂ ಮುನ್ನ ಇಂತಹ ಕೂಟಗಳು ನಡೆಯುತ್ತವೆ,” ಎಂದು ಅವರು ಹೇಳಿದರು.

ಆದರೆ ಪರಮೇಶ್ವರ್ ಅವರ “ನಾನೂ ಸಿಎಂ ಆಗಬಹುದು” ಎಂಬ ಹೇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಡಿಕೆ ಶಿವಕುಮಾರ್ ಬಣದ ಶಾಸಕರ ಹೇಳಿಕೆಗಳ ನಂತರ ಸಿಎಂ ಸಿದ್ದರಾಮಯ್ಯ ಬಣವೂ ಸಜೀವಗೊಂಡಿದ್ದು, ಇಬ್ಬರ ನಡುವಿನ ಒಳಸಂಘರ್ಷ ಮತ್ತೊಮ್ಮೆ ಬಯಲಾಗುತ್ತಿದೆ ಎನ್ನುವ ವಿಶ್ಲೇಷಣೆಗಳು ಎದುರಾಗಿವೆ. ಇದೇ ವೇಳೆಯಲ್ಲಿ ಸಿಎಂ ಆಪ್ತರ ಭೋಜನ ಕೂಟ ನಡೆಯಲಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
