ಕೆಮ್ಮಿನ ಸಿರಪ್ ಸೇವನೆಗೆ ಮಕ್ಕಳ ಸಾ** ಪ್ರಕರಣ – ಚೆನ್ನೈಯ 7 ಸ್ಥಳಗಳಲ್ಲಿ ಇಡಿ ದಾಳಿ

ಚೆನ್ನೈ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವನೆಯಿಂದ ಮಕ್ಕಳ ಸಾವು ಸಂಭವಿಸಿದ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಚೆನ್ನೈನಲ್ಲಿ 7 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿ ಶ್ರೇಸನ್ ಫಾರ್ಮಾ ಕಂಪನಿ ಹಾಗೂ ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆದಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಶೋಧ ನಡೆಯುತ್ತಿದೆ.

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಮತ್ತು ತಮಿಳುನಾಡು ಆಹಾರ ಹಾಗೂ ಔಷಧ ಆಡಳಿತ ಇಬ್ಬರ ಮೇಲೂ ಅನೇಕ ನಿಯಮ ಉಲ್ಲಂಘನೆಯ ಆರೋಪಗಳಿವೆ. ಕಳಪೆ ಮೂಲಸೌಕರ್ಯ, ಸುರಕ್ಷತಾ ಉಲ್ಲಂಘನೆಗಳು, ಹಾಗೂ ನಿಯಮ ಪಾಲನೆಯ ಕೊರತೆಯ ನಡುವೆಯೂ ಶ್ರೇಸನ್ ಕಂಪನಿಯು 2011ರಿಂದ ಪರವಾನಗಿ ಹೊಂದಿ ಕಾರ್ಯನಿರ್ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಹಣದ ಅಕ್ರಮ ವಹಿವಾಟು ಮತ್ತು ನಿಯಮ ಉಲ್ಲಂಘನೆ ಕುರಿತಂತೆ ವಿಸ್ತೃತ ತನಿಖೆ ನಡೆಸುತ್ತಿದ್ದಾರೆ.