ಅಕ್ಟೋಬರ್ 20ರಿಂದ ನವೆಂಬರ್ 1ರವರೆಗೆ ಮಂಗಳೂರನಲ್ಲಿ ‘ಗೋವಿಗೆ ಸಂಗೀತ ಸೇವೆ’ ಆಚರಣೆ

ಮಂಗಳೂರು (ಅ.13): ಗೋವುಗಳಿಗೋಸ್ಕರ ಸಂಗೀತ ಸೇವೆ ನಡೆಯುವ ವಿಶ್ವದ ಏಕೈಕ ಗೋಶಾಲೆ ಎಂದು ಖ್ಯಾತಿ ಪಡೆದಿರುವ ಕಾಸರಗೋಡಿನ ಬೇಕಲ್ ಗೋಕುಲಂ ಗೋಶಾಲೆ, ಐದನೇ ದೀಪಾವಳಿ ರಾಷ್ಟ್ರೀಯ ಸಂಗೀತ ಉತ್ಸವವನ್ನು ಅಕ್ಟೋಬರ್ 20ರಿಂದ ನವೆಂಬರ್ 1ರವರೆಗೆ ವಿಜೃಂಭಣೆಯಿಂದ ಆಚರಿಸಲಿದ್ದಾರೆ.

ಉತ್ಸವವು ಅಕ್ಟೋಬರ್ 20ರಂದು ಬೆಳಗ್ಗೆ 9 ಗಂಟೆಗೆ ಉಡುಪಿ ಪವನ ಆಚಾರ್ ಅವರ ನೇತೃತ್ವದ ವಿಶೇಷ ಸಂಗೀತ ಕಛೇರಿಯೊಂದಿಗೆ ಆರಂಭವಾಗಲಿದ್ದು, ಈ ವೇಳೆ ಐದು ವೀಣೆಗಳ ಸಂಯೋಜಿತ ಪ್ರದರ್ಶನ ವಿಶೇಷ ಆಕರ್ಷಣೆಯಾಗಲಿದೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಸಿಂಗಾಪುರ ಮತ್ತು ದುಬೈ ಸೇರಿದಂತೆ ವಿವಿಧ ರಾಜ್ಯ ಮತ್ತು ದೇಶಗಳಿಂದ ಸುಮಾರು 400 ಕಲಾವಿದರು ಭಾಗವಹಿಸಲಿದ್ದಾರೆ. ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ಸತತ ಸಂಗೀತ ಕಛೇರಿಗಳು ನಡೆಯಲಿವೆ.

ಈ ಬಾರಿ ಪದ್ಮವಿಭೂಷಣ ಡಾ. ಪದ್ಮಾ ಸುಬ್ರಮಣಿಯಂ ಸಮಾರೋಪ ದಿನದಂದು ನೃತ್ಯ ಪ್ರದರ್ಶಿಸಲಿದ್ದಾರೆ. ಪ್ರಸಿದ್ಧ ಡ್ರಮ್ ಮಾಸ್ಟರ್ ಶಿವಮಣಿ ಅವರ ಆಗಮನವೂ ಉತ್ಸವದ ಮತ್ತೊಂದು ಆಕರ್ಷಣೆ. ಸಂಗೀತ ಲೋಕದ ದಿಗ್ಗಜ 93 ವರ್ಷದ ಟಿ.ವಿ. ಗೋಪಾಲಕೃಷ್ಣನ್, ಪಟ್ಟಾಭಿರಾಮ ಪಂಡಿತ್, ಅಭಿಷೇಕ್ ರಘುರಾಮ್, ವಿದ್ಯಾ ಭೂಷಣ್, ಕರ್ನಾಟಕ ಸಹೋದರರು, ಎನ್.ಜೆ. ನಂದಿನಿ, ಶಂಕರನ್ ನಂಬೂದಿರಿ, ವೀಣಾ ವಿದ್ವಾಂಸರು ಅನಂತ ಪದ್ಮನಾಭನ್, ರಾಜೇಶ್ ವೈದ್ಯ, ರಮಣ ಬಾಲಚಂದ್ರ ಮತ್ತು ಕಣ್ಣನ್ ಚೆನ್ನೈ ಸೇರಿದಂತೆ ಅನೇಕ ಖ್ಯಾತ ಕಲಾವಿದರು ತಮ್ಮ ಸಂಗೀತ ಸೇವೆ ಸಲ್ಲಿಸಲಿದ್ದಾರೆ.