ಬೆಂಗಳೂರು (ಅ.13): ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ಅಕ್ಟೋಬರ್ 2ರಂದು ದೇಶದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾದ ಈ ಸಿನಿಮಾ, ಎರಡನೇ ವೀಕೆಂಡ್‌ನಲ್ಲೂ ದೊಡ್ಡ ಮಟ್ಟದ ಕಲೆಕ್ಷನ್ ದಾಖಲಿಸಿದೆ. ಎರಡನೇ ಶನಿವಾರ ಸುಮಾರು 40 ಕೋಟಿ ಗಳಿಕೆ ಮಾಡಿದ ನಂತರ, ಭಾನುವಾರದಂದು ಸಿನಿಮಾ ಇನ್ನಷ್ಟು ವೇಗದಲ್ಲಿ ಮುಂದುವರಿದಿದ್ದು, ದೇಶದಾದ್ಯಂತ 40 ಕೋಟಿಗೂ ಅಧಿಕ ಕಲೆಕ್ಷನ್ ದಾಖಲಿಸಿದೆ. ಇದರೊಂದಿಗೆ ಭಾರತದ ಒಟ್ಟು ಕಲೆಕ್ಷನ್ 440 ಕೋಟಿಗೂ ಮೀರಿದೆ. ವರ್ಲ್ಡ್‌ವೈಡ್ ಗಳಿಕೆ 600 ಕೋಟಿ ದಾಟಿದೆ ಎಂದು ವರದಿಗಳು ಸೂಚಿಸುತ್ತಿವೆ.

ಮೊದಲ ವಾರದಲ್ಲಿ ಮುಖ್ಯವಾಗಿ ‘ಕಾಂತಾರ’ ಅಭಿಮಾನಿಗಳು ಮತ್ತು ರಿಷಬ್ ಶೆಟ್ಟಿ ಅಭಿಮಾನಿಗಳು ಚಿತ್ರಮಂದಿರಗಳಿಗೆ ಹರಿದು ಬಂದರೆ, ಎರಡನೇ ವಾರದಲ್ಲಿ ಕುಟುಂಬ ಪ್ರೇಕ್ಷಕರೂ ಸಿನೆಮಾಗೆ ತೀವ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಕಾರಣದಿಂದಾಗಿ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ನಿರಂತರವಾಗಿ ಏರುತ್ತಿದೆ. 2022ರಲ್ಲಿ ಬಿಡುಗಡೆಯಾದ ‘ಕಾಂತಾರ’ ಸಿನಿಮಾದಂತೆಯೇ, ‘ಕಾಂತಾರ: ಚಾಪ್ಟರ್ 1’ ಕೂಡ ಮೊದಲ ವಾರದ ನಂತರ ಇನ್ನಷ್ಟು ವೇಗ ಪಡೆದು ಕೌಟುಂಬಿಕ ಪ್ರೇಕ್ಷಕರ ಬೆಂಬಲದೊಂದಿಗೆ ದೀರ್ಘ ಓಟ ನಡೆಸುತ್ತಿದೆ.
