ಕೋಲ್ಕತ್ತಾ, ಅಕ್ಟೋಬರ್ 12: ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಪ್ರಕರಣದ ಬಗ್ಗೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಅವರ ಪ್ರತಿಕ್ರಿಯೆಗೆ ತೀವ್ರ ವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾಧ್ಯಮಗಳಿಗೆ ಮಾತನಾಡಿದ ಸಿಎಂ ಹೇಳಿದ್ದು: “ಒಬ್ಬ ಹುಡುಗಿಯನ್ನು ರಾತ್ರಿ ಹೊರಗೆ ಹೋಗಲು ಬಿಡಬಾರದು. ಹೆಣ್ಣುಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು” ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ಹಲವರು ಮುಖ್ಯಮಂತ್ರಿಯವರ ಈ ಹೇಳಿಕೆಯನ್ನು ಬೇಜವಾಬ್ದಾರಿಯ ಎಂದು ಟೀಕಿಸಿದ್ದಾರೆ.

“ಈ ಘಟನೆ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಹೀಗಾಗಿ ಸರ್ಕಾರವನ್ನು ದೂಷಿಸುವುದು ಅನ್ಯಾಯ. ಖಾಸಗಿ ಕಾಲೇಜು ಅಧಿಕಾರಿಗಳು ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು. ಹುಡುಗಿಯರು ಮಧ್ಯರಾತ್ರಿ 12.30ಕ್ಕೆ ಹೊರಗೆ ಬಂದಿರುವುದು, ಕಾಲೇಜಿನಲ್ಲಿ ಭದ್ರತೆ ವ್ಯವಸ್ಥೆ ಇಲ್ಲವೇ ಎಂಬ ಪ್ರಶ್ನೆ ಹುಟ್ಟಿಸುತ್ತದೆ. ರಾತ್ರಿ ವೇಳೆ ಹುಡುಗಿಯರು ಹೊರಗೆ ಹೋಗುವುದು ಸುರಕ್ಷಿತವಲ್ಲ.” ಎಂದು ಅವರು ಹೇಳಿದ್ದಾರೆ.
