ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಪುರಾಣ ಪ್ರಸಿದ್ದ ಹಾಸನಾಂಬ ದೇವಿ ದೇವಾಲಯದ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 12 ಗಂಟೆಯ ನಂತರ ಹಾಸನಾಂಬೆಯ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ.ಅರಸು ವಂಶಸ್ಥರು ಬನ್ನಿ ಕಡಿದ ನಂತರ ಶಾಸ್ತ್ರೋಕ್ತ ವಿಧಾನದಂತೆ ಗರ್ಭಗುಡಿ ಬಾಗಿಲು ತೆರೆಯಲಾಗುವ ಈ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ, ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಹಾಗೂ ಸಂಸದ ಶ್ರೇಯಸ್ ಪಟೇಲ್ ಉಪಸ್ಥಿತರಿರಲಿದ್ದಾರೆ.

ಈ ಬಾರಿ ಹಾಸನಾಂಬ ಜಾತ್ರಾ ಮಹೋತ್ಸವ ಇಂದು ಆರಂಭಗೊಂಡು ಅಕ್ಟೋಬರ್ 23ರವರೆಗೆ ನಡೆಯಲಿದೆ. ಕೊನೆಯ ದಿನ ಹೊರತುಪಡಿಸಿ, 13 ದಿನಗಳ ಕಾಲ ಸಾರ್ವಜನಿಕರಿಗೆ ಹಾಸನಾಂಬೆಯ ದರ್ಶನಕ್ಕೆ ಅವಕಾಶವಿರಲಿದೆ.ಕಳೆದ ವರ್ಷ ಅಕ್ಟೋಬರ್ 24ರಿಂದ ನವೆಂಬರ್ 3ರವರೆಗೆ ನಡೆದ ಜಾತ್ರೆಯಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದರು. ಈ ಬಾರಿ 25 ಲಕ್ಷಕ್ಕೂ ಅಧಿಕ ಭಕ್ತರ ಆಗಮನ ನಿರೀಕ್ಷೆಯಿದೆ.

ಜಿಲ್ಲಾಡಳಿತವು ಜಾತ್ರೆಗಾಗಿ ಸಕಲ ಸಿದ್ಧತೆ ಮಾಡಿದ್ದು, ಭಕ್ತರ ಅನುಕೂಲಕ್ಕಾಗಿ ಹಲವು ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿದೆ. ಈ ಬಾರಿ ಜಾತ್ರೋತ್ಸವದಲ್ಲಿ ಹೆಲಿ ಟೂರಿಸಂ, ಟೂರ್ ಪ್ಯಾಕೇಜ್, ಶ್ವಾನ ಪ್ರದರ್ಶನ, ಪಾಕ ಸ್ಪರ್ಧೆ, ಜಾನಪದ ಉತ್ಸವ ಸೇರಿದಂತೆ ಅನೇಕ ಆಕರ್ಷಣೆಗಳಿವೆ.

