ಅನೈತಿಕ ಸಂಬಂಧಕ್ಕೆ ಅಡ್ಡಿ: ಹಾಸನದಲ್ಲಿ ಕುಟುಂಬಸ್ಥರಿಗೆ ಊಟದಲ್ಲಿ ವಿಷ ಹಾಕಿದ ಮಹಿಳೆ ಬಂಧನ

ಹಾಸನ: ಅಕ್ರಮ ಸಂಬಂಧಕ್ಕೆ ಕುಟುಂಬಸ್ಥರೇ ಅಡ್ಡಿಯಾದರೆಂಬ ಕಾರಣಕ್ಕೆ ಪತಿ, ಮಕ್ಕಳು ಹಾಗೂ ಅತ್ತೆ-ಮಾವನನ್ನು ವಿಷ ಹಾಕಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬೇಲೂರು ಪೊಲೀಸರು ಬಂಧಿಸಿದ್ದಾರೆ. ಬೇಲೂರು ತಾಲೂಕಿನ ಕೆರಳೂರು ಗ್ರಾಮದ ಚೈತ್ರ (33) ಬಂಧಿತ ಆರೋಪಿ.

ಘಟನೆಯ ಹಿನ್ನೆಲೆ: ಚೈತ್ರ ಹನ್ನೊಂದು ವರ್ಷಗಳ ಹಿಂದೆ ಗಜೇಂದ್ರ ಎಂಬವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಕೆಲವು ವರ್ಷಗಳ ಕಾಲ ಅನ್ನೋನ್ಯವಾಗಿದ್ದರು. ಆದರೆ, ಕಳೆದ ಮೂರು ವರ್ಷಗಳಿಂದ ಸಣ್ಣಪುಟ್ಟ ವಿಷಯಗಳಿಗೆ ಗಂಡನೊಂದಿಗೆ ಜಗಳವಾಡುತ್ತಿದ್ದ ಚೈತ್ರ, ಈ ನಡುವೆ ವ್ಯಕ್ತಿಯೋರ್ವನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಈ ವಿಷಯ ಗಜೇಂದ್ರನಿಗೆ ತಿಳಿದು, ಚೈತ್ರಳ ತಂದೆ-ತಾಯಿಗೆ ಮಾಹಿತಿ ನೀಡಿದ್ದರು. ಕುಟುಂಬಸ್ಥರ ರಾಜಿ ಪಂಚಾಯತಿಯ ನಂತರ ದಂಪತಿ ಕೆಲಕಾಲ ಅನ್ನೋನ್ಯವಾಗಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಮತ್ತೊಂದು ಅನೈತಿಕ ಸಂಬಂಧ: ಆದರೆ, ಕೆಲ ದಿನಗಳಿಂದ ಚೈತ್ರ, ಅದೇ ಗ್ರಾಮದ ಶಿವು ಎಂಬಾತನೊಂದಿಗೆ ಮತ್ತೊಂದು ಅನೈತಿಕ ಸಂಬಂಧ ಹೊಂದಿದ್ದಾಳೆ. ಈ ವಿಷಯ ಕುಟುಂಬಸ್ಥರಿಗೆ ತಿಳಿಯುವ ಮೊದಲೇ, ತನ್ನ ಸಂಬಂಧಕ್ಕೆ ಪತಿ, ಮಕ್ಕಳು ಹಾಗೂ ಅತ್ತೆ-ಮಾವ ಅಡ್ಡಿಯಾಗಬಹುದೆಂಬ ಅನುಮಾನದಿಂದ ಚೈತ್ರ, ಎಲ್ಲರನ್ನೂ ಸಾಮೂಹಿಕವಾಗಿ ಕೊಲೆ ಮಾಡಲು ಯೋಜನೆ ರೂಪಿಸಿದ್ದಳು. ಶಿವುನ ಸಹಕಾರದೊಂದಿಗೆ, ಚೈತ್ರ ಊಟ, ತಿಂಡಿಗಳಲ್ಲಿ ವಿಷಕಾರಿ ಮಾತ್ರೆಗಳನ್ನು ಬೆರೆಸುತ್ತಿದ್ದಳು. ಕುಟುಂಬಸ್ಥರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗ ವಿಷಪ್ರಾಶನ ಮಾಡಿರುವ ಕೃತ್ಯ ಗೊತ್ತಾಗಿದೆ ಎಂದು ಮಹಿಳೆಯ ಪತಿ ಗಜೇಂದ್ರ ಅವರು ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಬೇಲೂರು ಪೊಲೀಸರು ಚೈತ್ರಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಶಿವು ವಿರುದ್ಧವೂ ಪೊಲೀಸ್​​ ತನಿಖೆ ಆರಂಭವಾಗಿದೆ.