
ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವು ಸಂಭವಿಸುವ ಪ್ರಕರಣಗಳು ಮುಂದುವರಿದಿದ್ದು, ಇಂದು ಬೆಳಿಗ್ಗೆ ಒಂದೇ ದಿನದಲ್ಲಿ ಮೂವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕಳೆದ 40 ದಿನಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 21 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಹಾಸನ, ಜೂನ್ 30: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಸರಣಿ ಮುಂದುವರಿದಿದ್ದು, ಒಂದೇ ದಿನ ನಾಲ್ವರು ಮೃತಪಟ್ಟಿದ್ದಾರೆ. ಇದರೊಂದಿಗೆ, ಕಳೆದ 40 ದಿನಗಳಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಲೋಹಿತ್ (38) ಹೃದಯಾಘಾತದಿಂದ ಅಸುನೀಗಿದ್ದಾರೆ. ಬೇಲೂರಿನ ಜೆಪಿ. ಲೇಪಾಕ್ಷಿ (50), ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಮುತ್ತಯ್ಯ (58), ನುಗ್ಗೆಹಳ್ಳಿ ನಾಡಕಚೇರಿ ಡಿ ಗ್ರೂಪ್ ನೌಕರ ಕುಮಾರ್ (53) ಕೂಡ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಲೋಹಿತ್ ಕಳೆದ 18 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಜೆಯಲ್ಲಿ ಊರಿಗೆ ಬಂದಿದ್ದ ಅವರು, ಜುಲೈ 3ರಂದು ರಜೆ ಮುಗಿಸಿ ಕರ್ತವ್ಯಕ್ಕೆ ಮರಳುವವರಿದ್ದರು. ದುರದೃಷ್ಟವಶಾತ್, ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಗ್ರಾಮದ ನಾಡಕಚೇರಿ ಡಿ ಗ್ರೂಪ್ ನೌಕರ ಕುಮಾರ್ಗೆ ಭಾನುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಚನ್ನರಾಯಪಟ್ಟಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ಇವರು ಚನ್ನರಾಯಪಟ್ಟಣ ತಾಲೂಕಿನ ನಲ್ಲೂರು ಗ್ರಾಮದ ನಿವಾಸಿಯಾಗಿದ್ದಾರೆ.
ನಿಯಂತ್ರಣಕ್ಕೆ ಸೂಕ್ತ ಕ್ರಮ: ಸಿಎಂ ಸಿದ್ದರಾಮಯ್ಯ
ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಾದ ವಿಚಾರವಾಗಿ ಮೈಸೂರಿನಲ್ಲ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಆ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಹೃದಯಘಾತ ಹೆಚ್ಚಾಗಲು ಕಾರಣ ಏನು ಎಂಬುದಕ್ಕೆ ತಜ್ಞರ ಮೂಲಕ ಮಾಹಿತಿ ತರಿಸಿಕೊಳ್ಳುತ್ತೇನೆ. ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.



