ನವದೆಹಲಿ (ಅ.9): ಮಧ್ಯಪ್ರದೇಶದಲ್ಲಿ ಕಲುಷಿತ ಕೆಮ್ಮಿನ ಸಿರಪ್ ಸೇವನೆಯಿಂದ 20 ಮಕ್ಕಳ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚರಗೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ದೇಶದ ಎಲ್ಲಾ ರಾಜ್ಯಗಳಿಗೆ ತುರ್ತು ಸೂಚನೆ ನೀಡಿದ್ದು, ಎಲ್ಲಾ ಕೆಮ್ಮು ಸಿರಪ್‌ಗಳ ಸಮಗ್ರ ತಪಾಸಣೆ ನಡೆಸುವಂತೆ ಆದೇಶಿಸಿದೆ. ಸಿಡಿಎಸ್‌ಸಿಒ ಪತ್ರದಲ್ಲಿ, “ಪ್ರತಿ ಬ್ಯಾಚ್‌ನ ಕಚ್ಚಾ ವಸ್ತುಗಳು ಹಾಗೂ ತಯಾರಾದ ಔಷಧ ಫಾರ್ಮುಲೇಶನ್‌ಗಳನ್ನು ಬಳಕೆ ಅಥವಾ ಮಾರಾಟಕ್ಕೂ ಮುನ್ನ ಸರಿಯಾಗಿ ಪರೀಕ್ಷಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ತಪಾಸಣೆ ಇಲ್ಲದೆ ಔಷಧ ಮಾರುಕಟ್ಟೆಗೆ ಬಿಡುಗಡೆ ಆಗಬಾರದು” ಎಂದು ಸ್ಪಷ್ಟವಾಗಿ ತಿಳಿಸಿದೆ.

ಇತ್ತೀಚೆಗೆ ಕೆಲವು ಉತ್ಪಾದಕರು ಸರಿಯಾದ ಗುಣಮಟ್ಟ ತಪಾಸಣೆ ಮಾಡದೇ ಔಷಧ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ರಾಜ್ಯಗಳ ಔಷಧ ನಿಯಂತ್ರಕರಿಗೆ ತಪಾಸಣೆ ತೀವ್ರಗೊಳಿಸಲು ಸೂಚಿಸಲಾಗಿದೆ. ಕೋಲ್ಡ್ರಿಫ್ ಸಿರಪ್ ವಿದೇಶಕ್ಕೂ ರಫ್ತು ಆಗಿದೆಯೇ ಎಂಬ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಭಾರತ ಸರ್ಕಾರದಿಂದ ಸ್ಪಷ್ಟನೆ ಕೋರಿದೆ.

ಇದೀಗ ಮಧ್ಯಪ್ರದೇಶದ ಆರೋಗ್ಯ ಸಚಿವರು ಪ್ರತಿಕ್ರಿಯೆ ನೀಡುತ್ತಾ, “ಈ ದುರಂತಕ್ಕೆ ತಮಿಳುನಾಡು ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಕೋಲ್ಡ್ರಿಫ್ ಉತ್ಪಾದನಾ ಘಟಕ ಚೆನ್ನೈ ಬಳಿ ಇದೆ. ಅಲ್ಲಿ ಸರಿಯಾದ ತಪಾಸಣೆ ನಡೆದಿದ್ದರೆ, ಇಂತಹ ಸಾವುಗಳು ಸಂಭವಿಸುತಿರಲಿಲ್ಲ” ಎಂದು ಹೇಳಿದ್ದಾರೆ.



