ವೆನ್ಲಾಕ್ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆ ಆರಂಭ-ಉ.ಕನ್ನಡಕ್ಕೆ ಉಪಕಾರಿ

ಹೊನ್ನಾವರ ಅ. 08: ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಉಚಿತ ಹೃದಯರೋಗ ಚಿಕಿತ್ಸೆ ಆರಂಭವಾಗಿದೆ. ಬಿಪಿಎಲ್ ಕಾರ್ಡ್ ಹೊಂದಿದ ಬಡವರಿಗೆ ಚಿಕಿತ್ಸೆ ಸಂಪೂರ್ಣ ಉಚಿತವಾಗಿದ್ದು ಎಪಿಎಲ್ ಕಾರ್ಡ್ದಾರರಿಗೆ ರಿಯಾಯತಿ ದರದಲ್ಲಿ ಚಿಕಿತ್ಸೆ ಲಭ್ಯವಿದೆ. ಕೆಎಂಸಿಯ 60 ವರ್ಷದ ಇತಿಹಾಸದಲ್ಲಿ 175ವರ್ಷದ ಇತಿಹಾಸವಿರುವ ವೆನ್ಲಾಕ್ ಜೊತೆಗೂಡಿ ಈ ವಿಭಾಗವನ್ನು ಆರಂಭಿಸಿದೆ.

ಕಳೆದ 18-20 ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಗೆ ನಿಯಮಿತವಾಗಿ ಹೃದಯ ಚಿಕಿತ್ಸೆಯ ಸೌಲಭ್ಯವನ್ನು ಜಿಲ್ಲೆಗೆ ಬಂದು ನೀಡುತ್ತಿರುವ ಡಾ. ನರಸಿಂಹ ಪೈ, ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥರು. ಅವರ ನೇತೃತ್ವದಲ್ಲಿ ವೆನ್ಲಾಕ್ ಹೃದಯ ವಿಭಾಗ ಕೆಲಸ ಮಾಡುತ್ತಿದೆ. ಆದ್ದರಿಂದ ಉತ್ತರಕನ್ನಡದವರಿಗೆ ಇದು ಹೆಚ್ಚು ಅನುಕೂಲ.

ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರಾದ ಡಾ. ಶಿವಪ್ರಕಾಶ ಡಿಎಸ್ ಈ ಕುರಿತು ವಿವರ ನೀಡಿದ್ದಾರೆ. ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಮೂಲಕ ಹೃದಯ ಚಿಕಿತ್ಸೆ ಬಿಪಿಎಲ್ ಕಾರ್ಡ್ದಾರರಿಗೆ ಉಚಿತವಾಗಿದೆ. ಆಯುಷ್ಮಾನ್ ಕೋಡ್ ಇಲ್ಲದ ಕಾರಣ ಬಿಪಿಎಲ್ ಕಾರ್ಡ್ದಾರರು ಆಂಜಿಯೋಗ್ರಾಗೆ 5ಸಾವಿರ ರೂ. ಪಾವತಿ ಮಾಡಬೇಕಾಗುತ್ತದೆ. ಎಪಿಎಲ್ ಕಾರ್ಡ್ದಾರರಿಗೆ ಶೇ. 30ರಷ್ಟು ರಿಯಾಯತಿ ಇದ್ದು ಶೇ. 70ರಷ್ಟನ್ನು ಪಾವತಿ ಮಾಡಬೇಕಾಗುತ್ತದೆ. ಎಪಿಎಲ್ ಕಾರ್ಡ್ದಾರರಿಗೆ ಶೇ. 30ರಿಯಾಯತಿಯೊಂದಿಗೆ ಆಂಜಿಯೋಗ್ರಾಂ ಸಿಂಗಲ್ ಸ್ಟಂಟ್ 42,000ರೂ., ಆಂಜಿಯೋಗ್ರಾಂ ಡಬ್ಬಲ್ ಸ್ಟಂಟ್ 59,500 ರೂ., ಪಿಟಿಸಿಎ ಹೆಚ್ಚುವರಿ ಸ್ಟಂಟ್ 20,194ರೂ., ತುರ್ತು ಆಂಜಿಯೋಗ್ರಾಂ ಸಹಿತ 42,000 ರೂ., 2 ಡ್ರಗ್ ಎಲ್ಯೂಟಿಂಗ್ ಸ್ಟಂಟ್ 59,500ರೂ., ಥ್ರಂಬೋಲಿಸಿಸ್ ಸಹಿತ ಕವಾಟ 7,000ರೂ., ತಾತ್ಕಾಲಿಕ ಫೇಸ್ ಮೇಕರ್ 7,000ರೂ., ಆಂಜಿಯೋಗ್ರಾಂ 7,000ರೂ.ಗಳು.

ಡಾ. ನರಸಿಂಹ ಪೈ ನೇತೃತ್ವದಲ್ಲಿ ಡಾ. ಶೋಧನ್, ಡಾ. ವಿಜಯ, ಶುಶ್ರೂಷಾಧಿಕಾರಿ ಮೇರಿ ತಂಡದಿAದ ಚಿಕಿತ್ಸೆ ಆರಂಭವಾಗಿವೆ. ಬಡ, ಮಧ್ಯಮವರ್ಗಕ್ಕೆ ಇದರಿಂದ ತುಂಬ ಪ್ರಯೋಜನವಿದೆ. ಅತ್ಯಂತ ಬಡ ಕುಟುಂಬದ ಸೋಮಯ್ಯ ಎಂಬವರಿಗೆ ಪ್ರಥಮವಾಗಿ ಚಿಕಿತ್ಸೆ ನೀಡಿದ್ದೇವೆ. ಈಗ ಹೊಸ ವ್ಯವಸ್ಥೆ ಸುರಕ್ಷೆ ಗುಣಮಟ್ಟ ಮತ್ತು ರೋಗಿಯ ಸಂತೃಪ್ತಿಗೆ ಕಾರಣವಾಗುತ್ತಿದೆ. 8ಐಸಿಯು, 20ಕಾರ್ಡಿಯಾಕ್ ಹಾಸಿಗೆಗಳಿವೆ ಎಂದು ಡಾ. ನರಸಿಂಹ ಪೈ ಹೇಳಿದ್ದಾರೆ. ಪಲ್ಮನಾಲಜಿಸ್ಟ್ ಡಾ. ಶರತ್ ಬಾಬು ಈ ವಿಭಾಗಕ್ಕೆ ನೋಡಲ್ ಅಧಿಕಾರಿಯಾಗಿದ್ದಾರೆ ಎಂದು ಡಾ. ಶಿವಪ್ರಕಾಶ್ ಹೇಳಿದ್ದಾರೆ.