ಬೆಂಗಳೂರು: ರಾಜ್ಯದ 15 ಜಿಲ್ಲೆ ಮತ್ತು 27 ತಾಲ್ಲೂಕುಗಳ 252 ಗ್ರಾಮ ಪಂಚಾಯತಿಗಳಲ್ಲಿ ‘ನೀರಿದ್ದರೆ ನಾಳೆ’ ಯೋಜನೆ ಮೊದಲ ಹಂತದಲ್ಲಿ ಅನುಷ್ಠಾನಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನೈಸರ್ಗಿಕ ಜಲಮೂಲಗಳ ಸಂರಕ್ಷಣೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದರು. ನೀರಿನ ಮಹತ್ವ ತಿಳಿಸುವುದು, ಜಲಮೂಲಗಳ ಸಂರಕ್ಷಣೆಗೆ ಯೋಜನೆ ರೂಪಿಸುವುದು ಮತ್ತು ನಾಗರಿಕರನ್ನು ನೀರಿನ ಸಂರಕ್ಷಣಾ ಅಭಿಯಾನದಲ್ಲಿ ಪಾಲುಗಾರರನ್ನಾಗಿ ಮಾಡುವುದು ಯೋಜನೆಯ ಪ್ರಮುಖ ಗುರಿ ಎಂದು ತಿಳಿಸಿದರು.

ಮೊದಲ ಹಂತದಲ್ಲಿ 16 ಜಿಲ್ಲೆಗಳ 525 ಗ್ರಾಮ ಪಂಚಾಯತಿಗಳಲ್ಲಿ ಯೋಜನೆ ಜಾರಿಯಾಗಲಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲೇ 100ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಿವೆ ಎಂದರು. ಕನ್ನಡ ಚಿತ್ರರಂಗದ ನಟ ವಸಿಷ್ಠ ಸಿಂಹರನ್ನು ಯೋಜನೆಯ ರಾಯಭಾರಿಯಾಗಿ ನೇಮಿಸಲಾಗಿದೆ. ನಾಳೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗಲಿದೆ.
