ಬೆಂಗಳೂರು: ನಂಬರ್ ಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನು ಮುಂದೆ ನಂಬರ್ ಪ್ಲೇಟ್ ಇಲ್ಲದೇ ರಸ್ತೆಗಿಳಿದರೆ ನೇರವಾಗಿ ಸೆಕ್ಷನ್ 420 ಅಡಿ ವಂಚನೆ ಪ್ರಕರಣ ದಾಖಲಿಸಲಾಗುತ್ತಿದೆ.

ಪಶ್ಚಿಮ ವಿಭಾಗದಲ್ಲೇ ಈಗಾಗಲೇ 40ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದು, ನಗರದಾದ್ಯಂತ ನೂರಕ್ಕೂ ಅಧಿಕ ವಾಹನ ಸವಾರರ ವಿರುದ್ಧ ಕೇಸ್ ದಾಖಲಾಗಿದೆ. ಒಂದೇ ರಾತ್ರಿ ಸುಮಾರು 1000ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ನಂಬರ್ ಪ್ಲೇಟ್ ಹಾಕದೇ ಸಂಚಾರಿ ನಿಯಮ ಉಲ್ಲಂಘನೆ ಮರೆಮಾಚುವವರು, ಅಪರಾಧ ಕೃತ್ಯಗಳಿಗೆ ಬಳಸುವವರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಸಮರ್ಪಕ ಕಾರಣ ನೀಡಿದವರಿಗೆ ವಾಹನ ಹಿಂತಿರುಗಿಸಿದರೂ, ಕಾರಣ ನೀಡದವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ಕೋರ್ಟ್ ಮುಖಾಂತರ ಮಾತ್ರ ವಾಹನ ಬಿಡಿಸುವ ವ್ಯವಸ್ಥೆ ಮಾಡಲಾಗಿದೆ.
