ಚಿಕ್ಕಬಳ್ಳಾಪುರ: ಚಿಕ್ಕಪೈಲಗುರ್ಕಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಆನ್‌ಲೈನ್ ಬೆಟ್ಟಿಂಗ್‌ಗೆ ದಾಸನಾಗಿ ಬಡವರ ಹಣವನ್ನೇ ದುರುಪಯೋಗ ಮಾಡಿಕೊಂಡು ಪರಾರಿಯಾಗಿದ್ದಾನೆ. ನಿಂಗೇಶ್ ಎಂಬ ಪೋಸ್ಟ್ ಮಾಸ್ಟರ್, ಪಿಂಚಣಿ, ಕೂಲಿ, ಆರ್‌ಡಿ, ಎಫ್‌ಡಿ ಸೇರಿದಂತೆ 13 ಹಳ್ಳಿಗಳ ಜನರ ಜಮೆ ಹಣವನ್ನು ಆನ್‌ಲೈನ್ ಆಟಗಳಿಗೆ ಹಾಕಿ ಕಳೆದುಕೊಂಡಿದ್ದಾನೆ.

ಜನರಿಂದ ಬಂದ ಒತ್ತಡ ತಪ್ಪಿಸಲು ಕೆಲವರಿಗೆ ಸುಳ್ಳು ಹೇಳಿ, ಕೆಲವರಿಗೆ ಸ್ವಲ್ಪ ಹಣ ನೀಡಿ ಸಮಾಧಾನ ಮಾಡುತ್ತಿದ್ದ. ಆದರೆ ಈಗ 10 ಲಕ್ಷಕ್ಕೂ ಹೆಚ್ಚು ಹಣವನ್ನೇ ದುರುಪಯೋಗ ಮಾಡಿದ ಸಂಗತಿ ಬಯಲಾಗಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನರಸಿಂಹರೆಡ್ಡಿ ಎಂಬವರ ಮಕ್ಕಳ ಎಫ್‌ಡಿ ಹಣವನ್ನೂ ಡ್ರಾ ಮಾಡಿ ಕಸಿದುಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ವಿಷಯ ತಿಳಿದ ತಕ್ಷಣ ಅಂಚೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದು ತಿಂಗಳಿನಿಂದ ಕಚೇರಿಗೆ ಬಂದಿದ್ದ ಪತ್ರಗಳನ್ನೂ ಹಂಚದೇ ಬಿಟ್ಟು, ಕೊನೆಗೆ ನಿಂಗೇಶ್ ಪರಾರಿಯಾಗಿದ್ದಾನೆ. ಮೇಲಾಧಿಕಾರಿಗಳು ಅವನನ್ನು ಅಮಾನತು ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

