ಹೊನ್ನಾವರ: ತಾಲೂಕಿನ ಕೃಷಿ ಹುಟ್ಟುವಳಿ ಸಹಕಾರಿ ಮಾರಾಟ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮಾರ್ಕೆಟಿಂಗ್ ಸೊಸೈಟಿಯ ಕೇಂದ್ರ ಕಚೇರಿಯಲ್ಲಿ ನಡೆಯಿತು.

ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಗೋವಿಂದ ಎಸ್ ನಾಯ್ಕ ಗೇರುಸೊಪ್ಪಾ, ಉಪಾಧ್ಯಕ್ಷರಾಗಿ ಶಿವಾನಂದ ಹೆಬ್ಬಾರ ಮಾರುಕೇರಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿ ಸರಿತಾ ಬೇತಾಳಕರ ಚುನಾವಣಾ ಪ್ರಕ್ರಿಯೆ ನಡೆಸಿದರು. ನೂತನ ಅಧ್ಯಕ್ಷ,ಉಪಾಧ್ಯಕ್ಷರಿಗೆ ನಿರ್ದೇಶಕರು,ಸಂಘದ ಸಿಬ್ಬಂದಿಗಳು,ಹಿತೈಷಿಗಳು ಹೂಮಾಲೆ ಹಾಕಿ ಅಭಿನಂದಿಸಿದರು. ಇತ್ತೀಚಿಗೆ ಎರಡು ಬಣಗಳ ನಡುವೆ ನಡೆದ ತುರುಸಿನ ಚುನಾವಣೆಯಲ್ಲಿ ಸಚಿವ ಮಂಕಾಳ್ ವೈದ್ಯರ ಬೆಂಬಲಿತರ ಗುಂಪಿನ 10 ನಿರ್ದೇಶಕರು ಆಯ್ಕೆ ಆಗುವ ಮೂಲಕ ಬಹುಮತ ಪಡೆದಿರುವುದನ್ನು ಗಮನಿಸಬಹುದಾಗಿದೆ.

ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಂತರ ಗೋವಿಂದ ನಾಯ್ಕ ಮಾತನಾಡಿ, ಸಚಿವ ಮಂಕಾಳ್ ವೈದ್ಯರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಿ ಬಹುಮತ ಪಡೆದಿದ್ದೆವು, ಈಗ ಎಲ್ಲಾ ನಿರ್ದೇಶಕರು ಸೇರಿ ನನ್ನನ್ನು ಅಧ್ಯಕ್ಷರನ್ನಾಗಿ, ಶಿವಾನಂದ ಹೆಬ್ಬಾರ ಇವರನ್ನು ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರೆಲ್ಲರ ಸಹಕಾರ ಪಡೆದು ಸಂಸ್ಥೆಯ ಅಭಿವೃದ್ಧಿ ಪಡಿಸುವಂತ ಕೆಲಸ ಮಾಡುತ್ತೇವೆ. ನನ್ನನ್ನು ಅವಿರೋಧ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಚಂದ್ರಶೇಖರ ಗೌಡ, ತಿಲಕ್ ಗೌಡ, ರಾಜೇಂದ್ರ ನಾಯ್ಕ ಬೇರಂಕಿ, ಗಜಾನನ ನಾಯ್ಕ ಮಂಕಿ, ಯೋಗೇಶ್ ರಾಯ್ಕರ್, ಸುರೇಶ ಶೆಟ್ಟಿ, ಭಾಗೀರತಿ ಕೃಷ್ಣ ಭಟ್ಟ ಇದ್ದರು



