ಹೊನ್ನಾವರ ಸೆ.19 : ಕಳೆದ 9 ವರ್ಷದ ಹಿಂದೆ ನಡೆದ ಆಧ್ಯಾತ್ಮದ ವಿಜ್ಞಾನ ಏನಿಸಲ್ಪಡುವ ಅಷ್ಟಮಂಗಳದ ಸಂದರ್ಭದಲ್ಲಿ, ಪರಿಹಾರದ ಕಾರ್ಯಕ್ರಮವಾಗಿ ಜೀವಂತ “ಬಸವ ” ದೇವಳದಲ್ಲಿ ಇರಬೇಕು.ಊರಿಗೆ ಒಳಿತಾಗುತ್ತದೆ, ಗ್ರಾಮ ಅಭಿವೃದ್ಧಿ ಹೊಂದುತ್ತದೆ ಎನ್ನಲಾಗಿತ್ತು. ಈ ಹಿಂದೆ ಇಲ್ಲಿ ಜೀವಂತ ಬಸವನ ಚೈತನ್ಯದ ರೂಪ ಇತ್ತು. ಅದು ಸುತ್ತ ಮುತ್ತಲ ಗದ್ದೆಗೆ ಹೋಗಿ, ತನಗೆ ಬೇಕಾದಷ್ಟು ಮೇವು ತಿಂದು ಬರುತ್ತಿತ್ತು.

ಇಲ್ಲಿಯ ಹಿರಿಯರು ಆ ರೂಪವನ್ನು ಕಂಡವರು ಇದ್ದಾರೆ, ಹಾಗಾಗಿ ದೇವಾಲಯಕ್ಕೆ ಬಸವನ ಬಿಡಬೇಕು ಎನ್ನುವ ವಿಚಾರ ಬಂದ ಕಾರಣ, ಚಂದಾವರಕ್ಕೆ ಹೋಗಿ ತಂದು, ಪರಿಹಾರ ಕಾರ್ಯಕ್ರಮದಂದು ಪೂಜೆ ಮಾಡಿ ಬಿಡಲಾಗಿತ್ತು.ದೇವಾಲಯದ ಆವರಣದಲ್ಲಿ ಅತ್ತಿಂದಿತ್ತ ತಿರುಗಾಡುತ್ತಾ,ದೇವಾಲಯದಲ್ಲಿ ದೇವರಿಗೆ ಎದುರಾಗಿ ಕುಳಿತಾಗ ಥೇಟ್ ವಿಗ್ರಹ ರೂಪದ ನಂದಿಯೇ ಕುಳಿತಂತಾಗುತ್ತಿತ್ತು.ಸೌಮ್ಯ ಸ್ವಭಾವದ ಈ ಬಸವನಿಗೆ ದೇವಾಲಯಕ್ಕೆ ಬರುವ ಭಕ್ತರು ಬಾಳೆಹಣ್ಣು ನೀಡಿ ಪ್ರೀತಿಯಿಂದ ಸವರುತ್ತಿದ್ದರು.ಲವಲವಿಕೆಯಿಂದಿದ್ದ ಬಸವನಿಗೆ ಕೆಲವು ತಿಂಗಳ ಹಿಂದೆಯೇ ಅನಾರೋಗ್ಯ ಕಾಣಿಸಿಕೊಂಡಿತ್ತು.

ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಆ ಬಸವ 9 ವರ್ಷಗಳ ನಂತರ ಇಂದು ತನ್ನ ಉಸಿರನ್ನು ತ್ಯಾಗ ಮಾಡಿ, ದೇಹ ಬಿಟ್ಟು ಪರಮಾತ್ಮನಲ್ಲಿ ಐಕ್ಯವಾಯಿತು.ಗ್ರಾಮಸ್ಥರು,ದೇವಾಲಯದ ಪ್ರಮುಖರೊಡಗೂಡಿ ಧಾರ್ಮಿಕ ವಿಧಿವಿಧಾನದಂತೆ ಬಸವನ ಅಂತಿಮಸಂಸ್ಕಾರ ನೆರವೇರಿಸಿದರು. ಒಟ್ನಲ್ಲಿ ಗುಣವಂತೇಶ್ವರನ ಬಸವ ಇನ್ನು ನೆನಪು ಮಾತ್ರ ಎನ್ನಬಹುದು.
