1815.05 ಅಡಿಗೆ ತಲುಪಿದ ಲಿಂಗನಮಕ್ಕಿ- ಭರ್ತಿಗೆ ಕೇವಲ 4 ಅಡಿ ಮಾತ್ರ ಬಾಕಿ

ಹೊನ್ನಾವರ ಆ. 18: ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಬೀಳುತ್ತಿದ್ದು ಒಳ ಹರಿವು 59,981ಕ್ಯುಸೆಕ್ಸ್‌ಗಳಿಗೆ ಏರಿದೆ. ಆಣೆಕಟ್ಟಿನ ಜಲಮಟ್ಟ 1815.05 ಅಡಿಗಳಿಗೆ ಏರಿದೆ. ಆಣೆಕಟ್ಟು ಶೇ 91.37% ಭರ್ತಿಯಾಗಿದ್ದು ಪೂರ್ತಿ ತುಂಬಲು ಕೇವಲ 4 ಅಡಿಗಳು ಮಾತ್ರ ಬಾಕಿಯಿದೆ. ಇದೇ ರೀತಿ ಮಳೆ ಮುಂದುವರೆದಲ್ಲಿ ನೀರನ್ನು ಹೊರ ಬೀಡುವ ಸಾಧ್ಯತೆ ಇದೆ ಎಂದು ಕೆಪಿಸಿ ತಿಳಿಸಿದೆ.

ಆಣೆಕಟ್ಟು ಬಹುಪಾಲು ತುಂಬುತ್ತಾ ಬಂದಂತೆ ಗೇಟು ತೆರೆದು ನೀರು ಬಿಡಲು ಕೆಪಿಸಿ ಸಿದ್ಧತೆ ನಡೆಸುತ್ತ ಆಣೆಕಟ್ಟು ೮೫ರಷ್ಟು ಭರ್ತಿಯಾದಾಗ ಅಂತಿಮ ನೋಟೀಸನ್ನು ನೀಡುವ ಕ್ಷಣದಲ್ಲಿ ಮಳೆ ನಿಂತು ಆಣೆಕಟ್ಟು ತುಂಬಿದರೂ ತುಳುಕದೇ ಕೆಪಿಸಿ ಮತ್ತು ಶರಾವತಿಯ ಕೊಳ್ಳದ ಗೇರುಸೊಪ್ಪಾ ಹೊನ್ನಾವರ ಮಧ್ಯೆಯ ಜನ ಸಮಾಧಾನದ ನಿಟ್ಟುಸಿರು ಬಿಟ್ಟ ಉದಾಹರಣೆಗಳೇ ಹೆಚ್ಚಿದೆ.
ಇನ್ನೂ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣದಿಂದಾಗಿ ನದಿ ಪಾತ್ರದ ಜನರು ಸುರಕ್ಷತೆಯ ದೃಷ್ಟಿಯಿಂದ ಜನ, ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳವಂತೆ ಕೆಪಿಸಿ ಪ್ರಕಟನೆ ಹೊರಡಿಸಿದೆ.