
ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗುತ್ತಿರುವ ನಿರಂತರ ಮಳೆಯಿಂದಾಗಿ ಘೋಷಿಸಲಾಗಿದ್ದ ಶಾಲಾ ರಜೆಗಳ ಪರಿಣಾಮವಾಗಿ ನಷ್ಟವಾದ ಪಾಠದ ಅವಧಿಯನ್ನು ಸಮನ್ವಯಗೊಳಿಸಲು ಶಾಲಾ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಈ ಕುರಿತು ಉಪನಿರ್ದೇಶಕರ ಕಚೇರಿಯಿಂದ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.

ಉತ್ತರ ಕನ್ನಡ ಕಾರವಾರ ಶೈಕ್ಷಣಿಕ ಜಿಲ್ಲೆಯಾದ್ಯಂತ ಭಾರಿ ಮಳೆಯಿಂದಾಗಿ ಹವಾಮಾನ ಇಲಾಖೆಯು (ರೆಡ್ ಅಲರ್ಟ್) ಘೋಷಣೆ ನೀಡಿತ್ತು. ಇದರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು, 2005ರ ವಿಪತ್ತು ನಿರ್ವಹಣಾ ಕಾಯ್ದೆಯ ಕಲಂ 34(ಎಮ್) ಅಡಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ್ದರು.
ಜೂನ್ ಮತ್ತು ಜುಲೈ ತಿಂಗಳಲ್ಲಿ, ನಿರ್ದಿಷ್ಟವಾಗಿ ಜೂನ್ 12, 13, ಮತ್ತು 17 ಹಾಗೂ ಜುಲೈ 17 ಮತ್ತು 26 ರಂದು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಲಾಗಿತ್ತು. ಈ ರಜೆಗಳಿಂದ ಆಗುವ ಬೋಧನಾ ನಷ್ಟವನ್ನು ತಡೆಯುವ ಉದ್ದೇಶದಿಂದ, 2025ರ ಆಗಸ್ಟ್ 16ರಿಂದ ಆರಂಭವಾಗುವ ಪ್ರತಿ ಶನಿವಾರಗಳಂದು ಪೂರ್ಣ ದಿನ ಶಾಲಾ ತರಗತಿಗಳನ್ನು ನಡೆಸಿ ಪಾಠದ ಅವಧಿಯನ್ನು ಸರಿದೂಗಿಸಲು ಆದೇಶಿಸಲಾಗಿದೆ. ಈ ಕ್ರಮವು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಜಾರಿಗೊಳಿಸಲಾಗಿದೆ. ಶಾಲಾ ಆಡಳಿತ ಮಂಡಳಿಗಳು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂಬುದು ಜಿಲ್ಲಾಧಿಕಾರಿಗಳ ಸೂಚನೆ.
ಈ ನಿರ್ದೇಶನವು ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಮತ್ತು ಭಟ್ಕಳ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ತಲುಪಿಸಲಾಗಿದೆ.


