ಟಿಎಪಿಸಿಎಂಎಸ್ ಚುನಾವಣೆ : ಮಂಕಾಳ ವೈದ್ಯರ ಬಣದ ಐದು ನಿರ್ದೇಶಕರ ಭರ್ಜರಿ ಗೆಲುವು

ಹೊನ್ನಾವರ ಸೆ.08: ತಾಲೂಕಿನ ಕೃಷಿ ಹುಟ್ಟುವಳಿ ಸಹಕಾರಿ ಮಾರಾಟ ಸಂಘಕ್ಕೆ ರವಿವಾರ ನಡೆದ ಚುನಾವಣೆಯಲ್ಲಿ ಸಹಕಾರಿ ಕ್ಷೇತ್ರದ ನಿರ್ದೇಶಕರ ಆಯ್ಕೆಯ ಫಲಿತಾಂಶ ಹೊರಬಿದ್ದಿದ್ದು ಸಚಿವ ಮಂಕಾಳ ವೈದ್ಯರ ಬಣದ ಐದು ನಿರ್ದೇಶಕರು ಆಯ್ಕೆ ಆಗುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಸಹಕಾರಿ ಕ್ಷೇತ್ರ, ಹಿಂದುಳಿದ ವರ್ಗ, ‘ಬ’ ವರ್ಗ. ಪರಿಶಿಷ್ಟ ಪಂಗಡ, ಮಹಿಳಾ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಸಹಕಾರಿ ಕ್ಷೇತ್ರದ ಫಲಿತಾಂಶ ರವಿವಾರ ನಡೆದಿದೆ. ಉಳಿದ ಕ್ಷೇತ್ರದಲ್ಲಿ ನ್ಯಾಯಾಲಯದಿಂದ ಮತದ ಹಕ್ಕು ತಂದಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದೇ ಮತ ಎಣಿಕೆ ನಡೆಸಬೇಕಾಗಿದೆ.

ಸಹಕಾರಿ ಕ್ಷೇತ್ರದಿಂದ ಸಚಿವ ಮಂಕಾಳ ವೈದ್ಯರ ಬಣದ ಮಂಕಿ ಗಜಾನನ ದೇವಿದಾಸ ನಾಯ್ಕ, ಮಾವಿನಕುರ್ವಾದ ತಿಲಕ ಜಟ್ಟಿ ಗೌಡ, ಉಪ್ಪೋಣಿಯ ಯೋಗೇಶ ರಾಮಕೃಷ್ಣ ರಾಯ್ಕರ, ಬೇರಂಕಿಯ ರಾಜೇಂದ್ರ ತಿಮ್ಮಪ್ಪ ನಾಯ್ಕ, ಭಾಸ್ಕರಿಯ ಸುರೇಶ ಗಣಪತಿ ಶೆಟ್ಟಿ ವಿಜೇತರಾಗಿದ್ದಾರೆ. ಭಟ್ಕಳ ಸಹಕಾರಿ ಕ್ಷೇತ್ರದಿಂದ ಈಶ್ವರ ಬಿಳಿಯ ನಾಯ್ಕ ಬಸ್ತಿ, ಶಿವಾನಂದ ಹೆಬ್ಬಾರ ಮಾರುಕೇರಿ ಅವಿರೋಧ ಆಯ್ಕೆ ಆಗಿದ್ದರು. ಸಚಿವರ ಬಣದ ಒಟ್ಟು ಏಳು ನಿರ್ದೇಶಕರು ಆಯ್ಕೆ ಆದಂತೆ ಆಗಿದೆ. ಸಾಮಾನ್ಯ ಕ್ಷೇತ್ರದಿಂದ ಶಂಭು ಬೈಲಾರ್, ವಿ.ಎನ್. ಭಟ್ಟ ಅಳ್ಳಂಕಿ ಮತ್ತು ಪರಿಶಿಷ್ಟ ಜಾತಿ ಕ್ಷೇತ್ರದಿಂದ ಮಂಜುನಾಥ ಗಣಪ ಹಳ್ಳೆರ ಅವಿರೋಧ ಆಯ್ಕೆ ಆಗಿದ್ದಾರೆ. ಇವರು ವಿ.ಎನ್. ಭಟ್ಟ ಬಣದವರಾಗಿದ್ದಾರೆ.

ಪರಿಶಿಷ್ಟ ಪಂಗಡದಿಂದ ಭಟ್ಕಳದ ಅನಂತ ಮಂಗಳ ಗೊಂಡ, ತಲಗೋಡಿನ ಮಂಜುನಾಥ ಕರಿಯ ಗೊಂಡ, ಹಿಂದುಳಿದ ವರ್ಗದಿಂದ ಕೊಡಾಣಿಯ ಗಣಪ್ಪಯ್ಯ ನಾಗಪ್ಪ ಗೌಡ, ಗೇರುಸೊಪ್ಪದ ಗೋವಿಂದ ಸುಬ್ಬ ನಾಯ್ಕ, ‘ಬ’ ವರ್ಗದಿಂದ ಮಂಕಿ ಚಿತ್ತಾರದ ಚಂದ್ರಶೇಖರ ಜಿನದತ್ತ ಗೌಡ, ಕೆಳಗಿನ ಮೂಡ್ಕಣಿಯ ರವಿ ಸೈಮನ್ ಫರ್ನಾಂಡಿಸ್, ಮಹಿಳಾ ಮೀಸಲು ಕ್ಷೇತ್ರದಿಂದ ಜಲವಳ ಕರ್ಕಿಯ ಕವಿತಾ ಕೃಷ್ಣ ಮೇಸ್ತ,ವಂದೂರಿನ ಭಾಗೀರತಿ ಕೃಷ್ಣ ಭಟ್ಟ, ಸಾಲಕೋಡಿನ ಮಮತಾ ನಾಗರಾಜ ಹೆಗಡೆ, ಮಾಳಕೋಡಿನ ಮಂಜುಳಾ ಗಜಾನನಹೆಗಡೆ ಇವರು ಸ್ಪರ್ಧೆ ಮಾಡಿದ ಕ್ಷೇತ್ರದ ಮತ ಏಣಿಕೆ ನ್ಯಾಯಾಲಯದ ಅನುಮತಿಯ ನಂತರ ನಡೆಯಲಿದೆ.