ಹೊನ್ನಾವರ ಜೂ. 10: ಪಂಚಗಂಗಾ ರೈಲಿಗೆ ಹೆಚ್ಚುವರಿ ಕೋಚುಗಳ ಅಳವಡಿಕೆ ಆದರೆ ಸಮಯಕ್ಕೆ ಪ್ರಾಧಾನ್ಯತೆ ಇರಲಿ. ಬೆಳಿಗ್ಗೆ ಏಳು ಘಂಟೆಯ ಒಳಗೆ ಬೆಂಗಳೂರು ತಲುಪುವುದು ಕರಾವಳಿಯ ಎಲ್ಲಾ ವರ್ಗಕ್ಕೂ ತೀರಾ ಅನಿವಾರ್ಯ ಎಂದು ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿಯ ಕಾರ್ಯದರ್ಶಿ ರಾಜೀವ್ ಗಾಂವ್ಕರ್ ಲಿಖಿತ ಹೇಳಿಕೆ ನೀಡಿದ್ದಾರೆ.

ಹೆಚ್ಚುವರಿ ಕೋಚ್ ಅಳವಡಿಸಿ ಎಂಬ ಬೇಡಿಕೆ ಇಡುತ್ತಲೇ ಬಂದ ಉತ್ತರ ಕನ್ನಡ ರೈಲು ಬಳಕೆದಾರರ ಸಮಿತಿ ಹಾಗೂ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಮನವಿಗೆ ಕಡೆಗೂ ನೈಋತ್ಯ ರೈಲ್ವೆ ಸ್ಪಂದಿಸಿದ್ದು ಇದೇ ಜೂನ್ 11 ರಿಂದ ಹೆಚ್ಚುವರಿ 5 ಕೋಚ್ ಅಳವಡಿಸಿ ಪಂಚಗಂಗಾ ರೈಲು ಓಡಲಿದೆ. ಅಂದರೆ ಸುಮಾರು 400 ಹೆಚ್ಚುವರಿ ಸೀಟುಗಳು ಲಭ್ಯವಾಗಲಿದೆ.

ಈಗಾಗಲೇ ಪಂಚಗಂಗಾ ರೈಲು ಬೆಂಗಳೂರು ತಲುಪುವಾಗ ಟ್ರಾಪಿಕ್ ಆರಂಭವಾಗುತಿದ್ದು, ಕೆಲವೇ ನಿಮಿಷಗಳ ಕಾಲ ರೈಲು ವಿಳಂಬವಾದರೂ ಪ್ರಯಾಣಿಕರಿಗೆ ಮೆಜೆಸ್ಟಿಕ್ ನಿಲ್ದಾಣ ತಲುಪುವಾಗ ತೀವ್ರ ವಿಳಂಬವಾಗಿ ಆಪೀಸುಗಳಿಗೆ ರಜೆ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾದ ನಿದರ್ಶನಗಳೂ ಇದೆ. ಈ ಹಿನ್ನೆಲೆಯಲ್ಲಿ ಕಚೇರಿ ಕೆಲಸಗಳಿಗೆ ಯಾವ ಸಮಸ್ಯೆಯೂ ಆಗದಂತೆ ರೈಲು ಇನ್ನೂ ಬೇಗನೆ ಬೆಂಗಳೂರು ತಲುಪುವಂತೆ ನೋಡಿಕೊಳ್ಳುವಂತೆ ಸಂಸದರು ಹಾಗು ಶಾಸಕರಿಗೆ ಪ್ರಯಾಣಿಕರು ಆಗ್ರಹಪಡಿಸಿದ್ದಾರೆ.
