ಶರಾವತಿ ಕೊಳ್ಳದ ಜನರಿಗೆ ರಕ್ಷಣೆ ನೀಡಿದ ಎಸ್. ಆರ್. ನಾಯಕ

ಹೊನ್ನಾವರ ಮೇ. 20: ನಿವೃತ್ತ ನ್ಯಾಯಮೂರ್ತಿ, ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ಎಸ್. ಆರ್. ನಾಯಕ ಅವರು ಇನ್ನಿಲ್ಲ. ಅವರು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಕೊಟ್ಟ ತೀರ್ಪು ಮತ್ತು ಸರ್ಕಾರಕ್ಕೆ ನೀಡಿದ ನಿರ್ದೇಶನಗಳು ಶರಾವತಿ ಕೊಳ್ಳದ ಜನರಿಗೆ ಸದಾ ರಕ್ಷಣೆ ಒದಗಿಸುತ್ತಿದೆ. 1980ರ ಸುಮಾರಿಗೆ ಲಿಂಗನಮಕ್ಕಿ ಆಣೆಕಟ್ಟಿನಿಂದ ಏಕಾಏಕಿ ನೀರು ಬಿಟ್ಟ ಕಾರಣ ಗೇರುಸೊಪ್ಪೆಯಿಂದ ಹೊನ್ನಾವರದವರೆಗಿನ 35 ಕಿ.ಮೀ. ಉದ್ದದ ಪ್ರದೇಶದ ಶರಾವತಿ ಎಡಬಲ ದಂಡೆಯ ಸಾವಿರಾರು ಮನೆಗಳು ಮುಳುಗಿ ನೀರು ಪಾಲಾದವು. ಸರ್ಕಾರ ನೈಸರ್ಗಿಕ ವಿಕೋಪ ಎಂದು ಸಾಂಕೇತಿಕ ಪರಿಹಾರ ಕೊಟ್ಟಿತ್ತು. ನಂತರ ಮೂರು ಬಾರಿ ನೆರೆ ಬಂದು ಜಲಾವೃತವಾಗಿ ಹಲವಾರು ರೈತರ ಮನೆಗಳಿಗೆ ಹಾನಿಯಾಯಿತು. ಮನೆಯಲ್ಲಿ ಇಟ್ಟ ಬಟ್ಟೆ-ಬರೆ, ಆಹಾರ ಸಾಮಾಗ್ರಿ ನೀರು ಪಾಲಾಯಿತು.

ನೆರೆ ಬಂದಾಗ ಸರ್ಕಾರ ಶಾಲೆಗಳಲ್ಲಿ ಗಂಜಿ ಕೇಂದ್ರ ತೆರೆದು ಊಟ ಹಾಕಿ ಅಲ್ಪ ಪರಿಹಾರ ಕೊಟ್ಟು ಮನೆಗೆ ಕಳಿಸುತ್ತಿತ್ತು. ಇದು ಪ್ರಕೃತಿ ವಿಕೋಪವಲ್ಲ, ಕೆಪಿಸಿ ನಿರು ಬಿಟ್ಟು ಸೃಷ್ಟಿಸುವ ಕೃತಕ ನೆರೆ. ಇದನ್ನು ತಡೆಯಬೇಕು, ಜನರಿಗೆ ಹಾನಿಯ ಪೂರ್ತಿ ಪರಿಹಾರ ಕೊಡಬೇಕು ಎಂದು ಜನ ಆಗ್ರಹಿಸಿದರು. ಕೆಪಿಸಿ ಲಿಂಗನಮಕ್ಕಿಯ ಪ್ರತಿ ಅಡಿ ನೀರಿಗೆ 10ಕೋಟಿ ರೂ. ವಿದ್ಯುತ್ ಉತ್ಪಾದನೆ ಆಗುವುದರಿಂದ ಗರಿಷ್ಠ 1819 ಅಡಿ ತುಂಬಿಸುವುದು ಅನಿವಾರ್ಯ ಎಂದು ಹೇಳಿತ್ತು.

ಶರಾವತಿ ಕೊಳ್ಳದ ಜನ ಚಂದ್ರಕಾಂತ ಕೊಚರೇಕರ್ ನೇತೃತ್ವದಲ್ಲಿ ನೆರೆ ನಿರಾಶ್ರಿತರ ಸಮಿತಿ ರಚಿಸಿಕೊಂಡು ಅಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದ ನ್ಯಾ.ಮೂ. ಎಸ್. ಆರ್. ನಾಯಕರಿಗೆ ದೂರು ನೀಡಲಾಗಿತ್ತು. ಅವರು ಸ್ವತಃ ಶರಾವತಿ ಕೊಳ್ಳಕ್ಕೆ ಆಗಮಿಸಿ ವಿಚಾರಣೆ ನಡೆಸಿದರು. ಕೆಪಿಸಿಯ ವಿದ್ಯುತ್ ಮತ್ತು ಆದಾಯಕ್ಕಿಂತ ಮಾನವ ಹಕ್ಕು ಮುಖ್ಯವಾದದ್ದು ಎಂದು ತೀರ್ಪು ನೀಡಿ ಆಣೆಕಟ್ಟು ಪೂರ್ತಿ ತುಂಬುವವರೆಗೆ ಕಾಯದೇ ಆಣೆಕಟ್ಟಿನ ಒಳಹರಿವನ್ನು ಅಂದಾಜಿಸಿ 1819 ಅಡಿ ತುಂಬಿದಾಗ ಸ್ವಲ್ಪ ಸ್ವಲ್ಪ ನೀರು ಬಿಟ್ಟು ನೆರೆ ತಪ್ಪಿಸಬೇಕು, ಹಾನಿಗೊಳಗಾದ ರೈತರಿಗೆ ಪೂರ್ತಿ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದರು.

ಕೆಪಿಸಿ ನಂತರ ಆಯೋಗದ ನಿರ್ದೇಶನವನ್ನು ಪಾಲಿಸುತ್ತಿರುವುದರಿಂದ ಮಳೆ ಹೆಚ್ಚಾದರೂ ನೆರೆ ಬರದಂತೆ ಕೆಪಿಸಿ ನಿರ್ವಹಣೆ ಮಾಡುತ್ತಿದೆ. ಶರಾವತಿ ಕೊಳ್ಳದ ಜನರ ಮಾತ್ರವಲ್ಲ ಕನ್ನಡ ನಾಡಿನ ಎಲ್ಲ ಆಣೆಕಟ್ಟಿನ ತಗ್ಗುಪ್ರದೇಶದಲ್ಲಿರುವವರ ಮಾನವ ಹಕ್ಕಿಗೆ ರಕ್ಷಣೆ ನೀಡಿದ್ದಕ್ಕಾಗಿ ನಾವು ಸದಾ ಎಸ್. ಆರ್. ನಾಯಕ ಅವರನ್ನು ಸ್ಮರಿಸುತ್ತೇವೆ ಎಂದು ಚಂದ್ರಕಾಂತ ಕೊಚರೇಕರ್ ಲಿಖಿತ ಹೇಳಿಕೆ ನೀಡಿದ್ದಾರೆ.