ಉತ್ತರ ಕನ್ನಡ (ಶಿರಸಿ) ಆ.29 : “ಪಕ್ಷದ ಬಲಾಬಲ ಬದಲಾದರೂ ಸಭಾಪತಿಯನ್ನು ಬದಲಿಸುವುದು ಅಪರೂಪ. ಕಾಂಗ್ರೆಸ್ ಅಂತಹ ಕೆಲಸ ಮಾಡಿದರೆ ಅದು ಇತಿಹಾಸ ನಿರ್ಮಾಣವಾಗಲಿದೆ. ಈ ಕುರ್ಚಿ ಯಾರಿಗೂ ಶಾಶ್ವತವಲ್ಲ” ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ನಗರದ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ದೊಡ್ಮನೆ ಅವರ ಜನ್ಮಶತಮಾನೋತ್ಸವ ಅಂಗವಾಗಿ ಶುಕ್ರವಾರ ಹೆಗಡೆ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.

“ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದರೂ ನಾನು ಅಧಿಕಾರಕ್ಕೆ ಅಂಟಿಕೊಳ್ಳುವವನು ಅಲ್ಲ. ಸಭಾಪತಿ ಸ್ಥಾನದಿಂದ ಇಳಿಸಲು ಪ್ರಯತ್ನವಾದರೆ ತಕ್ಷಣ ರಾಜೀನಾಮೆ ನೀಡುತ್ತೇನೆ. ಅದರಲ್ಲಿ ನನಗೆ ಬೇಸರವಿಲ್ಲ. ಒಂದು ವರ್ಷ ಮಾಡಿದರೂ ಮಾಜಿ ಸಭಾಪತಿ, ಹತ್ತು ವರ್ಷ ಮಾಡಿದರೂ ಮಾಜಿ ಸಭಾಪತಿ ಎಂಬುದೇ ಸತ್ಯ” ಎಂದು ಹೊರಟ್ಟಿ ಸ್ಪಷ್ಟಪಡಿಸಿದರು. ಹಿಂದೆ ಪಕ್ಷ ಬದಲಾದ ಸಂದರ್ಭದಲ್ಲೇ ಉಗ್ರಪ್ಪ ಮತ್ತು ಶಂಕರಮೂರ್ತಿ ಅವರನ್ನು ಸ್ಥಾನದಿಂದ ಕೆಳಗಿಳಿಸಲಾಗಿತ್ತು ಎಂದು ಅವರು ನೆನಪಿಸಿದರು.

ಇಂದಿನ ರಾಜಕೀಯದ ಬಗ್ಗೆ ಟೀಕಿಸಿದ ಹೊರಟ್ಟಿ, “ಮೌಲ್ಯಾಧಾರಿತ ರಾಜಕೀಯ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲೇ ಮುಗಿದಿದೆ. ಈಗ ಹಣಕ್ಕಾಗಿ ಮತ ಹಾಕುವುದು, ಹಣ ಕೊಟ್ಟು ಮತ ಪಡೆಯುವುದೇ ನಡೆಯುತ್ತಿದೆ. ಮೌಲ್ಯಗಳನ್ನು ಉಳಿಸುವ ಜವಾಬ್ದಾರಿ ಮಾಧ್ಯಮದ ಮೇಲಿದೆ. ನಾವೂ ಶಿಕ್ಷಣ ಮತ್ತು ತರಬೇತಿಯ ಮೂಲಕ ಮೌಲ್ಯ ಉಳಿಸಲು ಪ್ರಯತ್ನಿಸುತ್ತಿದ್ದೇವೆ” ಎಂದರು.


