ಬುಲೆಟ್ ರೈಲು ಪ್ರಯಾಣದಲ್ಲಿ ಜಪಾನ್ ಪ್ರಧಾನಿ ಇಶಿಬಾ ಜೊತೆಗೆ ಪ್ರಧಾನಿ ಮೋದಿ

ಟೋಕಿಯೋ, ಆಗಸ್ಟ್ 30: ಜಪಾನ್ ಭೇಟಿಯ ಎರಡನೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸೆಂಡೈಗೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದರು. ಈ ಪ್ರಯಾಣಕ್ಕೆ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಹಾಗೂ ಅನೇಕ ಉನ್ನತಾಧಿಕಾರಿಗಳು ಜೊತೆಗಿದ್ದರು. ಭಾರತದಲ್ಲಿ ಅಹಮದಾಬಾದ್–ಮುಂಬೈ ನಡುವೆ ನಿರ್ಮಾಣವಾಗುತ್ತಿರುವ ಬುಲೆಟ್ ರೈಲು ಯೋಜನೆ ಕುರಿತು ಮೋದಿ ಅವರಿಗೆ ಆಲ್ಫಾ-ಎಕ್ಸ್ ರೈಲಿನ ತಾಂತ್ರಿಕ ವಿವರಗಳನ್ನು ನೀಡಲಾಯಿತು. ಪ್ರಯಾಣಕ್ಕೂ ಮುನ್ನ, ಜಪಾನ್‌ನಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ರೈಲು ಚಾಲಕರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು. ನಂತರ ನಡೆದ ಸಭೆಯಲ್ಲಿ, ಭಾರತದ ಹೂಡಿಕೆ ವಾತಾವರಣ ಕುರಿತು ಮಾತನಾಡಿದ ಅವರು – “ಭಾರತದಲ್ಲಿ ಬಂಡವಾಳ ಬೆಳೆಯುವುದಷ್ಟೇ ಅಲ್ಲ, ಅದು ದುಪ್ಪಟ್ಟಾಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಟ್ರೋ (ಜಪಾನ್ ಬಾಹ್ಯ ವ್ಯಾಪಾರ ಸಂಸ್ಥೆ) ಮಾಹಿತಿಯ ಪ್ರಕಾರ, ಭಾರತದಲ್ಲಿ ಶೇ.80ರಷ್ಟು ವಿದೇಶಿ ಕಂಪನಿಗಳು ತಮ್ಮ ವ್ಯವಹಾರ ವಿಸ್ತರಿಸಲು ಬಯಸುತ್ತಿವೆ ಹಾಗೂ ಶೇ.75ರಷ್ಟು ಕಂಪನಿಗಳು ಈಗಾಗಲೇ ಲಾಭದಲ್ಲಿವೆ. “ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯಿಂದ ಭಾರತ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ” ಎಂದು ಮೋದಿ ಹೇಳಿದರು. ಮೆಟ್ರೋ ರೈಲುಗಳಿಂದ ಸೆಮಿಕಂಡಕ್ಟರ್‌ಗಳವರೆಗೆ, ಸ್ಟಾರ್ಟ್‌ಅಪ್‌ಗಳಿಂದ ಉತ್ಪಾದನಾ ವಲಯವರೆಗೆ ಜಪಾನ್ ಭಾರತದ ವಿಶ್ವಾಸಾರ್ಹ ಪಾಲುದಾರ ಎಂದು ಅವರು ಶ್ಲಾಘಿಸಿದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದ ಜಪಾನಿನ ವ್ಯಾಪಾರ ನಾಯಕರೊಂದಿಗೆ ಬೆಳೆಸಿಕೊಂಡ ಸಂಬಂಧಗಳನ್ನು ಮೋದಿ ಸ್ಮರಿಸಿದರು. ಜಪಾನಿನ ಉದ್ಯಮಿಗಳಿಗೆ “ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್” ಎಂಬ ಆಹ್ವಾನ ನೀಡಿದರು.

ಮುಂದಿನ ಹಂತವಾಗಿ, ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1ರಂದು ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಜಪಾನ್‌ನಿಂದ ಚೀನಾಕ್ಕೆ ಪ್ರಯಾಣಿಸಲಿದ್ದಾರೆ. “ಜಪಾನ್ ಮತ್ತು ಚೀನಾಕ್ಕೆ ನನ್ನ ಈ ಭೇಟಿ, ಭಾರತದ ಹಿತಾಸಕ್ತಿಗಳನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಪ್ರಾದೇಶಿಕ ಹಾಗೂ ಜಾಗತಿಕ ಶಾಂತಿ, ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಹಕಾರಿಯಾಗಲಿದೆ” ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.